Monday, May 25, 2026
Google search engine

Homeದೇಶಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದನಾ ನಿಗ್ರಹ ಆಪರೇಷನ್ : ಸರ್ಚ್ ಆಪರೇಷನ್ ತೀವ್ರ

ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದನಾ ನಿಗ್ರಹ ಆಪರೇಷನ್ : ಸರ್ಚ್ ಆಪರೇಷನ್ ತೀವ್ರ

ಜಮ್ಮು : ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯು ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅಡಗಿರುವ ಉಗ್ರರನ್ನು ಪತ್ತೆಹಚ್ಚಲು ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಶನಿವಾರ ಕಾಡಿನ ಪ್ರದೇಶದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ ಮುಖಾಮುಖಿ ಆರಂಭವಾಯಿತು.

ಭಯೋತ್ಪಾದಕರ ಗುಂಡಿನ ದಾಳಿಗೆ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿದ್ದು, ನಂತರ ಅಲ್ಲಿ ಗುಂಡಿನ ಚಕಮಕಿ ತೀವ್ರಗೊಂಡಿದೆ. ರಾಜೌರಿ ಜಿಲ್ಲೆಯ ಗಂಭೀರ್ ಮುಗಲನ್ ಕಾಡುಗಳಲ್ಲಿ 2-3 ಉಗ್ರರು ಅಡಗಿರುವ ಬಗ್ಗೆ ಲಭ್ಯವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ (CRPF) ಒಳಗೊಂಡ ಭದ್ರತಾ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ನಾಗ್ರೋಟಾ ಮೂಲದ ಸೇನೆಯ ‘ವೈಟ್ ನೈಟ್ ಕೋರ್’ ಶನಿವಾರ ಎಕ್ಸ್ (X) ಪೋಸ್ಟ್‌ನಲ್ಲಿ ಹೀಗೆ ತಿಳಿಸಿದೆ

“ಆಪರೇಷನ್ ಶೇರಾವಾಲಿ: ಭಯೋತ್ಪಾದಕರೊಂದಿಗೆ ಮುಖಾಮುಖಿ”

ಸೇನೆಯು ಮುಂದುವರಿದು, “ ಸುಮಾರು 11:30 ರ ಸುಮಾರಿಗೆ ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಜೊತೆಗೂಡಿ ನಡೆಸಿದ ಗುಪ್ತಚರ ಆಧಾರಿತ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ, ರಾಜೌರಿಯ ಗಂಭೀರ್ ಮುಗಲನ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವುದು ಪತ್ತೆಯಾಗಿದೆ. ಸೈನಿಕರು ತಕ್ಷಣವೇ ಮತ್ತು ಯೋಜಿತ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ಎರಡೂ ಕಡೆಯಿಂದ ಗುಂಡಿನ ದಾಳಿ ಆರಂಭವಾಗಿದ್ದು, ಇಡೀ ಪ್ರದೇಶವನ್ನು ಪರಿಣಾಮಕಾರಿಯಾಗಿ ಸುತ್ತುವರಿಯಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ,” ಎಂದು ಹೇಳಿದೆ. ನಿನ್ನೆ ಭಯೋತ್ಪಾದಕರ ಇರುವಿಕೆ ಪತ್ತೆಯಾದ ತಕ್ಷಣ, ಅವರು ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಮುಚ್ಚಲು ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.

ಸವಾಲಿನ ಪರಿಸರ ಮತ್ತು ಬಿಗಿ ಭದ್ರತೆ

ಈ ಕಾಡಿನ ಪ್ರದೇಶದಲ್ಲಿ ಇಬ್ಬರಿಂದ ಮೂವರು ಭಯೋತ್ಪಾದಕರು ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಾಜೌರಿ ಜಿಲ್ಲೆಯ ಪೀರ್ ಪಂಜಾಲ್ ಶ್ರೇಣಿಯಲ್ಲಿರುವ ಈ ಅರಣ್ಯ ಪ್ರದೇಶವು ತನ್ನ ಕಡಿದಾದ ಬೆಟ್ಟಗಳು, ದಟ್ಟವಾದ ಕಾಡುಗಳು ಮತ್ತು ಸೀಮಿತ ಸಂಪರ್ಕ ವ್ಯವಸ್ಥೆಯಿಂದಾಗಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

ಭದ್ರತಾ ಸಿಬ್ಬಂದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಿದ್ದಾರೆ. ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ವಾಹನಗಳು ಮತ್ತು ಪಾದಚಾರಿಗಳ ಸಂಚಾರದ ಮೇಲೆ ತೀವ್ರ ನಿಗಾ ಇಡಲಾಗಿದೆ. ದಿನವಿಡೀ ಸರ್ಚ್ ಆಪರೇಷನ್ ಮುಂದುವರಿದಿದ್ದು, ಭದ್ರತಾ ಪಡೆಗಳು ಕಾಡಿನ ಹಲವು ಭಾಗಗಳಲ್ಲಿ ವ್ಯವಸ್ಥಿತವಾಗಿ ತೀವ್ರ ಶೋಧ ನಡೆಸುತ್ತಿವೆ.

ಇಡೀ ಪ್ರದೇಶವನ್ನು ಭದ್ರತಾ ವಲಯಕ್ಕೆ ಒಳಪಡಿಸಲಾಗಿದ್ದು, ಶೋಧ ಕಾರ್ಯ ಇನ್ನೂ ಜಾರಿಯಲ್ಲಿದೆ. ಸ್ಥಳೀಯ ಜನರು ಭದ್ರತಾ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದ್ದು, ಪರಿಸ್ಥಿತಿ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಲಿದೆ ಎಂದು ಆಶಿಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇದುವರೆಗೆ ಯಾವುದೇ ಕಡೆಯಿಂದ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular