Friday, May 29, 2026
Google search engine

Homeಅಪರಾಧಕಾನೂನುಬಾಡಿಗೆದಾರರಿಗೆ ಸಾಲದ ಶೇ.50 ಠೇವಣಿ ಕಡ್ಡಾಯವಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬಾಡಿಗೆದಾರರಿಗೆ ಸಾಲದ ಶೇ.50 ಠೇವಣಿ ಕಡ್ಡಾಯವಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಬ್ಯಾಂಕುಗಳಿಂದ ಸಾಲ ಪಡೆದ ಆಸ್ತಿಗಳ ಮಾಲೀಕರು ಸುಸ್ತಿದಾರರಾದ ಸಂದರ್ಭದಲ್ಲಿ, ಆ ಕಟ್ಟಡದಲ್ಲಿ ಬಾಡಿಗೆಗೆ ವಾಸಿಸುವವರು ಅಥವಾ ಕಚೇರಿ ನಡೆಸುವವರನ್ನು ಸಾಲಗಾರರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸಾಲ ವಸೂಲಾತಿ ನ್ಯಾಯಾಧಿಕರಣದ (ಡಿಆರ್‌ಟಿ) ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ವೇಳೆ ಬಾಡಿಗೆದಾರರು ಸಾಲದ ಮೊತ್ತದ ಶೇ.50 ಪೂರ್ವ ಠೇವಣಿ ಇಡಬೇಕೆಂಬ ನಿಯಮ ಅವರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇಟ್ಟಿಯಂ ಸಿಸ್ಟಮ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ, ಸರ್ಫೇಸಿ ಕಾಯ್ದೆಯ ಸೆಕ್ಷನ್ 18ರ ಎರಡನೇ ನಿಬಂಧನೆಯಲ್ಲಿ “ಸಾಲಗಾರ” ಮಾತ್ರ ಪೂರ್ವ ಠೇವಣಿ ಇಡಬೇಕು ಎಂದು ಉಲ್ಲೇಖಿಸಿರುವುದಾಗಿ ಹೇಳಿದೆ. ಬಾಡಿಗೆದಾರನ ಮೇಲೆ ಸಾಲದ ಹೊಣೆಗಾರಿಕೆ ಹೇರಲು ಸಾಧ್ಯವಿಲ್ಲ; ಅದು ಅನ್ಯಾಯ ಹಾಗೂ ತಾರತಮ್ಯವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಬೆಂಗಳೂರು ರಿಚ್‌ಮಂಡ್ ರಸ್ತೆಯ ‘ಕಾನ್ಸುಲೇಟ್-1’ ಕಟ್ಟಡದ ನಾಲ್ಕನೇ ಮಹಡಿಯಲ್ಲಿ 2001ರಿಂದ ಇಟ್ಟಿಯಂ ಸಿಸ್ಟಮ್ಸ್ ಕಂಪನಿ ಬಾಡಿಗೆಗೆ ಕಾರ್ಯನಿರ್ವಹಿಸುತ್ತಿದೆ. ಕಟ್ಟಡದ ಮಾಲೀಕ ಉತ್ತಮ್ ಚಂದಾನಿ ಬ್ಯಾಂಕ್ ಸಾಲ ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್ ಕಟ್ಟಡ ಸ್ವಾಧೀನ ಪ್ರಕ್ರಿಯೆ ಆರಂಭಿಸಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಡಿಆರ್‌ಟಿ ಪೂರ್ವ ಠೇವಣಿ ಕಾರಣ ನೀಡಿ ತಿರಸ್ಕರಿಸಿತ್ತು. ಇದೀಗ ಹೈಕೋರ್ಟ್ ಆ ಆದೇಶ ರದ್ದುಪಡಿಸಿ, ಯಾವುದೇ ಪೂರ್ವ ಠೇವಣಿ ಬೇಡದೆ ಮೇಲ್ಮನವಿಯನ್ನು ಮೆರಿಟ್ ಆಧಾರದ ಮೇಲೆ ವಿಚಾರಿಸಬೇಕು ಎಂದು ಸೂಚಿಸಿದೆ.

RELATED ARTICLES
- Advertisment -
Google search engine

Most Popular