ಚೆನ್ನೈ: ರೈಲ್ವೆ ಸೇವೆಗಳ (ಪಿಂಚಣಿ) ನಿಯಮಗಳು, 1993ರ ಅನ್ವಯ ಮಲ ಮಗ (Step Son) ಕುಟುಂಬ ಪಿಂಚಣಿ ಪಡೆಯಲು ಅರ್ಹನಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಮೃತ ದಕ್ಷಿಣ ರೈಲ್ವೆ ಉದ್ಯೋಗಿಯ ಮಲ ಮಗನಿಗೆ ಕುಟುಂಬ ಪಿಂಚಣಿ ನೀಡುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣಿಯಂ ಮತ್ತು ಎನ್. ಸೆಂಥಿಲ್ ಕುಮಾರ್ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಸರ್ಕಾರಿ ನೌಕರರು ಗ್ರಾಚ್ಯುಟಿ ಪಡೆಯಲು ಯಾವುದೇ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಬಹುದಾದರೂ, ಕುಟುಂಬ ಪಿಂಚಣಿ ನೀಡುವ ಸಂದರ್ಭದಲ್ಲಿ ಪಿಂಚಣಿ ನಿಯಮಗಳಲ್ಲಿರುವ “ಕುಟುಂಬ” ಎಂಬ ವ್ಯಾಖ್ಯಾನವನ್ನೇ ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಪ್ರಕರಣವು ದಕ್ಷಿಣ ರೈಲ್ವೆಯಲ್ಲಿ ಪಾಯಿಂಟ್ಸ್‌ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದ ದಿವಂಗತ ಜಿ. ಕಲೈಸೆಲ್ವಿ ಅವರ ಮಲ ಮಗ ಜಿ. ಚೆಂಗಲನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದೆ. ಕಲೈಸೆಲ್ವಿ ಅವರು 2008ರಲ್ಲಿ ನಿಧನರಾಗಿದ್ದು, ಬಳಿಕ ಚೆಂಗಲನ್ ಕುಟುಂಬ ಪಿಂಚಣಿ ಕೋರಿ CAT ಮೊರೆ ಹೋಗಿದ್ದರು. 2023ರಲ್ಲಿ ನ್ಯಾಯಮಂಡಳಿ ಅವರ ಪರವಾಗಿ ಆದೇಶ ನೀಡಿತ್ತು.
ಆದರೆ ಈ ಆದೇಶವನ್ನು ಪ್ರಶ್ನಿಸಿ ದಕ್ಷಿಣ ರೈಲ್ವೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಮೃತ ಉದ್ಯೋಗಿಯ ಗ್ರಾಚ್ಯುಟಿ ನಿಯಮ 70ರ ಅಡಿಯಲ್ಲಿ ಚೆಂಗಲನ್ ಅವರಿಗೆ ಈಗಾಗಲೇ ನೀಡಲಾಗಿದೆ. ಆದರೆ ಗ್ರಾಚ್ಯುಟಿ ಪಡೆಯುವ ಹಕ್ಕು ಮತ್ತು ಕುಟುಂಬ ಪಿಂಚಣಿ ಪಡೆಯುವ ಹಕ್ಕು ವಿಭಿನ್ನವಾಗಿದ್ದು, ಒಂದರಿಂದ ಮತ್ತೊಂದು ಹಕ್ಕು ದೊರೆಯುವುದಿಲ್ಲ ಎಂದು ರೈಲ್ವೆ ವಾದಿಸಿತು.
ಈ ವಾದವನ್ನು ಒಪ್ಪಿಕೊಂಡ ಹೈಕೋರ್ಟ್, ನಿಯಮ 75ರ ಪ್ರಕಾರ ಕುಟುಂಬ ಪಿಂಚಣಿ ಪಡೆಯುವ “ಕುಟುಂಬ”ದ ವ್ಯಾಖ್ಯಾನದಲ್ಲಿ ಸಂಗಾತಿ ಹಾಗೂ ನಿಯಮಗಳಲ್ಲಿ ಉಲ್ಲೇಖಿಸಿರುವ ಅರ್ಹ ಮಕ್ಕಳು ಮಾತ್ರ ಸೇರುತ್ತಾರೆ. ಮಲ ಮಗನನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ, CAT ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಜಿ. ಚೆಂಗಲನ್ ಅವರಿಗೆ ಕುಟುಂಬ ಪಿಂಚಣಿ ನೀಡುವ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪು ಭವಿಷ್ಯದ ಇಂತಹ ಪ್ರಕರಣಗಳಿಗೆ ಮಹತ್ವದ ಮಾರ್ಗದರ್ಶಿಯಾಗುವ ಸಾಧ್ಯತೆ ಇದೆ.



