ಧಾರವಾಡ: ರಾಜ್ಯದ ಆರ್ಥಿಕತೆ ಕಳೆದ ಮೂರು ವರ್ಷಗಳಲ್ಲಿ ತೀವ್ರ ಹದಗೆಟ್ಟಿದ್ದು, ನೂತನ ನಾಯಕತ್ವಕ್ಕೆ ಅದನ್ನು ಸುಧಾರಿಸುವ ಸವಾಲು ಎದುರಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 136 ಸ್ಥಾನಗಳನ್ನು ನೀಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಜನರ ನಿರೀಕ್ಷೆಗಳು ಈಡೇರಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಅಭಿವೃದ್ಧಿ, ಸುಭಿಕ್ಷೆ ಮತ್ತು ಉತ್ತಮ ಆಡಳಿತದ ನಿರೀಕ್ಷೆ ಇತ್ತಾದರೂ, ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲೇ ಹೆಚ್ಚು ತೊಡಗಿಕೊಂಡಿದೆ ಎಂದು ಟೀಕಿಸಿದರು. ಭ್ರಷ್ಟಾಚಾರವೂ ಹಿಂದೆಂದೂ ಕಾಣದ ಮಟ್ಟಿಗೆ ಹೆಚ್ಚಾಗಿದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಅವರಿಗೆ ಇದೀಗ ಉತ್ತಮ ಅವಕಾಶ ದೊರೆತಿದ್ದು, ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಮೂಲಕ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಬೇಕು. ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಚಾಕಚಕ್ಯತೆಯಿಂದ ಆಡಳಿತ ನಡೆಸಬೇಕಿದೆ ಎಂದು ಬೆಲ್ಲದ್ ಅಭಿಪ್ರಾಯಪಟ್ಟರು.



