ರಾಮನಗರ : ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಆತಂಕ ಎದುರಿಸುತ್ತಿರುವ ಕಾಂಗ್ರೆಸ್ ತನ್ನ ಮತಗಳ ರಕ್ಷಣೆಗಾಗಿ ರೆಸಾರ್ಟ್ ಮೊರೆಹೋಗಿದೆ.
ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ಜೂನ್ 18 ರಂದು ಅಂದರೆ ನಾಳೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಇಂದು ಬಿಡದಿ ರೆಸಾರ್ಟ್ ನಲ್ಲಿ ತನ್ನ ಶಾಸಕರಿಗಾಗಿ ಅಣಕು ಮತದಾನ ಆಯೋಜಿಸಿತ್ತು. ಇದರಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಭಾಗವಹಿಸಿದರು.
ವಿಧಾನ ಪರಿಷತ್ ಕಣದಲ್ಲಿ ಏಳನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣಾ ಕಣ ರಂಗೇರುವಂತೆ ಮಾಡಿದೆ. ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 2 ಹಾಗೂ ಜೆಡಿಎಸ್ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ನ ನಾಲ್ವರು ಹಾಗೂ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸರಾಗವಾಗಿ ಗೆಲುವು ಸಾಧಿಸಲಿದ್ದಾರೆ. ಆದರೆ ಏಳನೇ ಸ್ಥಾನಕ್ಕೆ ಜಟಾಪಟಿ ಶುರುವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್ ಅಭ್ಯರ್ಥಿ ಗೋವಿಂದ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇದರ ಮಧ್ಯೆ ಬಿಜೆಪಿಯ ಉಚ್ಛಾಟಿತ ಶಾಸಕರಾದ ಎಸ್ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡಿರುವುದು ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ಏಳನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದ್ದು, ಕೆಲ ಜೆಡಿಎಸ್ ಹಾಗೂ ಬಿಜೆಪಿಯಿಂದ ಗೆದ್ದಿರುವ ಶಾಸಕರನ್ನು ಸೆಳೆಯುವ ಯತ್ನ ನಡೆಸಿದೆ. ಇದರ ನಡುವೆ ಬಿಜೆಪಿಯ ಇಬ್ಬರು ಉಚ್ಛಾಟಿತ ಶಾಸಕರು, ಕಾಂಗ್ರೆಸ್ ಶಾಸಕರಿರುವ ವಂಡರ್ ಲಾ ರೆಸಾರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.



