ಮೈಸೂರು: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಯಾವುದೇ ಅಡೆ ತಡೆ ಬಾರದಿರಲಿ ಎಂದು ಪ್ರಾರ್ಥಿಸಿ ಮೈಸೂರಿನಲ್ಲಿ ಶಾಸಕ ಕೆ.ಹರೀಶ್ ಗೌಡ ನೇತೃತ್ವದಲ್ಲಿ ಶ್ರೀ ಯಶೋಧಕೃಷ್ಣ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶ್ರೀ ದುರ್ಗಾ ಪರಮೇಶ್ವರರ ಸಪ್ತಶತಿಃ ಪಾರಾಯಣ ಹಾಗೂ ಚಂಡಿಕಾ ಯಾಗವನ್ನು ಸಂಭ್ರಮದಿಂದ ನೇರವೇರಿಸಿದರು.
ನಗರದ ನಂಜರಾಜ ಬಹುದ್ದೂರ್ ಛತ್ರದಲ್ಲಿ ಆಯೋಜಿಸಿದ್ದ ಯಾಗದ ನೇತೃತ್ವವಹಿಸಿದ್ದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ನಿನ್ನೆ ರಾತ್ರಿ ದುರ್ಗಸಪ್ತ ಸತಿ ಪಾರಾಯಣ ಸಂಜೆ ೭ಕ್ಕೆ ಶುರುವಾಗಿ ೧೦ ಗಂಟೆವರೆಗೆ ನಡೆಯಿತು. ೩೫೦ಕ್ಕೂ ಹೆಚ್ಚು ಮಂದಿ ಪಾರಾಯಣದಲ್ಲಿ ಭಾಗವಹಿಸಿದ್ದರು. ಇಂದು ಅರ್ಚನೆ ಮಹಾಯಾಗ ದುರ್ಗಾ ಪರಮೇಶ್ವರರ ಮಹಾಯಾಗ ನಡೆಯಿತು. ೮೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಯಾವುದೇ ಅಡೆ ತಡೆ ಆಗಬಾರದು. ಬರಗಾಲ ಬರಬಾರದು. ರಾಜ್ಯಕ್ಕೆ ಹೊಸತನವನ್ನು ತರಬೇಕೆಂಬ ನಿಟ್ಟಿನಲ್ಲಿ ಹೊರಟಿರುವ ಮತ್ತು ಅವರ ಆಲೋಚನೆ ಜಾರಿಗೆ ತರುವಲ್ಲಿ ದುರ್ಗಾಮಾತೆ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಲಾಗಿದೆ. ಜತೆಗೆ ಮೈಸೂರಿನವರಾದ ಸಿದ್ದರಾಮಯ್ಯ ನಮಗೆಲ್ಲಾ ದೇವರಿದ್ದಂತೆ ಅವರಿಗೆ ಮತ್ತಷ್ಟು ಆರೋಗ್ಯ ಕರುಣಿಸಿ, ಪಕ್ಷ ಸಂಘಟನೆಗೆ ಹೆಚ್ಚಿನ ಶಕ್ತಿ ನೀಡಲೆಂದು ಇಬ್ಬರೂ ನಾಯಕರ ಹೆಸರಿನಲ್ಲಿ ಪೂಜೆ ಮಾಡುತ್ತಿದ್ದೇವೆ. ಜತೆಗೆ ಬರಗಾಲ ಮನ್ಸೂಚನೆ ಕಾಡುತ್ತಿದ್ದು, ಮಳೆ-ಬೆಳೆಯಾಗಿ ರಾಜ್ಯ ಸುಬಿಕ್ಷೆಯಾಗಲಿ ಎಂದು ಲೋಕಕಲ್ಯಾಣಕ್ಕೆ ಪ್ರಾರ್ಥಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ಆದಿಚುಂಚನಗರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಶ್ರೀ ಯೋಗನರಸಿಂಹ ಸ್ವಾಮಿ ದೇವಾಲಯದ ಡಾ.ಭಾಷ್ಯಂ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಮುಕ್ತಿದಾನಂದಜಿ, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಚಾಮರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಚೇಗೌಡನಕೊಪ್ಪಲು ರವಿ, ನಾಗಭೂಷಣ್ ಇನ್ನಿತರರು ಭಾಗವಹಿಸಿದ್ದರು.



