ಚೆನ್ನೈ: ತಮಿಳುನಾಡು ಸರ್ಕಾರ ಇನ್ನು ಮುಂದೆ ಖರೀದಿಸುವ ಎಲ್ಲಾ ಹೊಸ ಸರ್ಕಾರಿ ಬಸ್ಗಳು ಕಡ್ಡಾಯವಾಗಿ ಹವಾ ನಿಯಂತ್ರಿತ (ಎಸಿ) ಸೌಲಭ್ಯ ಹೊಂದಿರಲಿವೆ ಎಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಿರ್ದೇಶನ ನೀಡಿದ್ದಾರೆ. ಈ ಕುರಿತು ಸಾರಿಗೆ ಸಚಿವ ವಿಜಯ್ ತಮಿಳನ್ ಪಾರ್ಥಿಬನ್ ಮಾಹಿತಿ ನೀಡಿದ್ದು, ಸಾರ್ವಜನಿಕರಿಗೆ ಉತ್ತಮ, ಆರಾಮದಾಯಕ ಹಾಗೂ ಗುಣಮಟ್ಟದ ಸಾರಿಗೆ ಸೇವೆ ಒದಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಆಶಯದಂತೆ, ರಾಜ್ಯದ ಎಲ್ಲ ನಾಗರಿಕರು ಎಸಿ ಬಸ್ಗಳಲ್ಲಿ ಪ್ರಯಾಣಿಸುವಂತಾಗಬೇಕು. ಅಲ್ಲದೆ, ತಮಿಳುನಾಡಿನ ದೂರದ ಗ್ರಾಮಗಳು ಮತ್ತು ನಗರ ಪ್ರದೇಶಗಳನ್ನು ಬಲಿಷ್ಠ ಹಾಗೂ ಸಮರ್ಪಕ ಬಸ್ ಜಾಲದ ಮೂಲಕ ಸಂಪರ್ಕಿಸುವ ಯೋಜನೆಯೂ ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಈ ಘೋಷಣೆ ಇತ್ತೀಚೆಗೆ ಚೆನ್ನೈಯ ಕಾಮರಾಜರ್ ಸಲೈ, ಮರೀನಾ ಬೀಚ್ ಸಮೀಪ ನಡೆದ “ಸ್ಟಾರ್ಟ್ ರನ್, ಸ್ಟಾಪ್ ಡ್ರಗ್ಸ್” ಮಾದಕ ವಸ್ತು ವಿರೋಧಿ ಮ್ಯಾರಥಾನ್ ಕಾರ್ಯಕ್ರಮದ ಕೆಲವೇ ದಿನಗಳ ಬಳಿಕ ಬಂದಿದೆ. 52 ವರ್ಷದ ಮುಖ್ಯಮಂತ್ರಿ ವಿಜಯ್ ಅವರು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮೂರು ಕಿಲೋಮೀಟರ್ ಮ್ಯಾರಥಾನ್ನಲ್ಲಿ ಭಾಗವಹಿಸಿ, ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಅವರು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಪ್ರತಿಜ್ಞೆ ಬೋಧಿಸಿ, ಕುಟುಂಬ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು. ಜೊತೆಗೆ “Sports Edu, Drugs Vidu”(ಕ್ರೀಡೆ ಅಳವಡಿಸಿ, ಮಾದಕ ವಸ್ತು ಬಿಡಿ) ಎಂಬ ಸಂದೇಶವುಳ್ಳ ಬ್ಯಾನರ್ಗೆ ಸಹಿ ಹಾಕಿದರು.
ಇತ್ತೀಚೆಗೆ ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೇಕೆದಾಟು ಅಣೆಕಟ್ಟು ಯೋಜನೆ, ಮೀನುಗಾರರ ಬಂಧನ ಹಾಗೂ ತಮಿಳು ಪ್ರಾರ್ಥನಾ ಗೀತೆಯ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಬಂದರು, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಹಾಗೂ ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಬೆಳವಣಿಗೆಗಳ ನಡುವೆ ರಾಜ್ಯದ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಎಸಿ ಬಸ್ಗಳ ನಿರ್ಧಾರ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.



