ಬೆಂಗಳೂರು: ನೈಸ್ ರಸ್ತೆ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ನಲ್ಲಿ ಇಂದಿನಿಂದ ಪರಿಷ್ಕೃತ ಟೋಲ್ ದರ ಜಾರಿಗೆ ಬಂದಿದೆ. ನಿರ್ವಹಣಾ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಂದ ಟೋಲ್ ದರವನ್ನು ಹೆಚ್ಚಿಸಲಾಗಿದೆ. ಇದರ ಪರಿಣಾಮ ಕಾರು, ದ್ವಿಚಕ್ರ ವಾಹನ, ಬಸ್ ಹಾಗೂ ಟ್ರಕ್ಗಳ ಸಂಚಾರ ವೆಚ್ಚ ಹೆಚ್ಚಾಗಲಿದ್ದು, ಪ್ರಯಾಣಿಕರ ಮೇಲೂ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.
ಹೊಸ ದರದಂತೆ, ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆವರೆಗೆ ಕಾರುಗಳ ಟೋಲ್ ಶುಲ್ಕ 65 ರೂ.ನಿಂದ 72 ರೂ.ಗೆ ಏರಿಕೆಯಾಗಿದೆ. ಇದೇ ಮಾರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ 30 ರೂ. ಇದ್ದ ಟೋಲ್ 33 ರೂ.ಗೆ ಹೆಚ್ಚಿಸಲಾಗಿದೆ. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯವರೆಗೆ ಬೈಕ್ಗಳ ಟೋಲ್ 15 ರೂ.ನಿಂದ 17 ರೂ.ಗೆ ಏರಿಕೆಯಾಗಿದೆ. ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವಿನ ಕಾರುಗಳ ಟೋಲ್ 70 ರೂ.ನಿಂದ 77 ರೂ.ಗೆ ಹೆಚ್ಚಿಸಲಾಗಿದೆ. ವಿವಿಧ ವಿಭಾಗಗಳಲ್ಲಿ ಕಾರುಗಳಿಗೆ 3ರಿಂದ 8 ರೂ.ವರೆಗೆ ಹೆಚ್ಚಳ ಮಾಡಲಾಗಿದೆ.
ಬಸ್ ಹಾಗೂ ಟ್ರಕ್ಗಳ ಟೋಲ್ ದರವನ್ನೂ ಹೆಚ್ಚಿಸಲಾಗಿದೆ. ಹೊಸೂರು ರಸ್ತೆ–ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ಬಸ್ಗಳ ಟೋಲ್ 195 ರೂ.ನಿಂದ 215 ರೂ.ಗೆ, ಟ್ರಕ್ಗಳ ಟೋಲ್ 128 ರೂ.ನಿಂದ 141 ರೂ.ಗೆ ಏರಿಕೆಯಾಗಿದೆ. ಇದರಿಂದ ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚವೂ ಹೆಚ್ಚುವ ಸಾಧ್ಯತೆ ಇದೆ.
ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ನ ಏಕಮುಖ ಪ್ರಯಾಣದ ಟೋಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಒಂದೇ ದಿನದಲ್ಲಿ ಹಲವು ಬಾರಿ ಸಂಚರಿಸುವ ವಾಹನಗಳಿಗೆ ಅನ್ವಯವಾಗುವ ಮಲ್ಟಿಪಲ್ ಟ್ರಿಪ್ ಟೋಲ್ ದರವನ್ನು 5 ರೂ.ವರೆಗೆ ಹೆಚ್ಚಿಸಲಾಗಿದೆ. ಕಾರು, ಜೀಪ್ ಹಾಗೂ ವ್ಯಾನ್ಗಳಿಗೆ ಮಲ್ಟಿಪಲ್ ಟ್ರಿಪ್ ಶುಲ್ಕ 100 ರೂ., ಲಘು ವಾಣಿಜ್ಯ ವಾಹನಗಳಿಗೆ 130 ರೂ. ನಿಗದಿಯಾಗಿದೆ.
ಟೋಲ್ ದರ ಹೆಚ್ಚಳದಿಂದ ಖಾಸಗಿ ವಾಹನ ಸವಾರರು, ವಾಣಿಜ್ಯ ವಾಹನ ಚಾಲಕರು ಹಾಗೂ ನಿತ್ಯ ಸಂಚರಿಸುವ ಪ್ರಯಾಣಿಕರ ಜೇಬಿಗೆ ಹೆಚ್ಚುವರಿ ಹೊರೆ ಬೀಳಲಿದ್ದು, ಸಾರಿಗೆ ವೆಚ್ಚದ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.



