Friday, July 3, 2026
Google search engine

Homeರಾಜ್ಯಸುದ್ದಿಜಾಲಆಮಿಷವೊಡ್ಡಿ ಮತಾಂತರಕ್ಕೆ ಯತ್ನ ಆರೋಪ : ಸತ್ಯಾಸತ್ಯತೆ ಪರಿಶೀಲನೆಗೆ ಪೊಲೀಸರ ಮುಂದಾಳತ್ವ

ಆಮಿಷವೊಡ್ಡಿ ಮತಾಂತರಕ್ಕೆ ಯತ್ನ ಆರೋಪ : ಸತ್ಯಾಸತ್ಯತೆ ಪರಿಶೀಲನೆಗೆ ಪೊಲೀಸರ ಮುಂದಾಳತ್ವ

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಮತಾಂತರ ನಡೆಯುತ್ತಿದೆ ಎನ್ನಲಾದ ಮನೆಗೆ ದಿಢೀರ್ ಭೇಟಿ ನೀಡಿದ್ದು, ಈ ವೇಳೆ ಮನೆಯಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆ ನಡೆಯುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ ಎಂದು ಹೇಳಲಾಗಿದೆ.

ಈ ವೇಳೆ ಬಜರಂಗದಳ ಕಾರ್ಯಕರ್ತರು ಸ್ಥಳದಲ್ಲಿದ್ದವರನ್ನು ಪ್ರಶ್ನಿಸಲು ಮುಂದಾದಾಗ, ಮತಾಂತರ ಯತ್ನದ ಆರೋಪ ಎದುರಿಸುತ್ತಿದ್ದ ಕೆಲವರು ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಕಾನೂನುಬಾಹಿರವಾಗಿ ಧರ್ಮಾಂತರ ಚಟುವಟಿಕೆಗಳು ನಡೆಯುತ್ತಿದ್ದರೆ ಅವುಗಳನ್ನು ತಕ್ಷಣವೇ ತಡೆಯಬೇಕು. ಅಲ್ಲದೆ, ಬಡ ಕುಟುಂಬಗಳಿಗೆ ಆಮಿಷವೊಡ್ಡಿ ಮತಾಂತರ ನಡೆಸುವ ಜಾಲದ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಂಬಂಧಿತ ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸಿದರು. ಪೊಲೀಸರ ವಿಚಾರಣೆ ವೇಳೆ, ನಾವು ಯಾವುದೇ ಧರ್ಮಾಂತರ ಮಾಡಿಕೊಂಡಿಲ್ಲ. ಮನೆಯಲ್ಲಿ ಕೇವಲ ಪ್ರಾರ್ಥನೆ ಮಾತ್ರ ನಡೆಯುತ್ತಿತ್ತು ಎಂದು ಕುಟುಂಬ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು, ಮುಂದಿನ ದಿನಗಳಲ್ಲಿ ಯಾರಾದರೂ ಧರ್ಮಾಂತರಕ್ಕೆ ಒತ್ತಾಯಿಸಿದರೆ ಅಥವಾ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕುಟುಂಬ ಸದಸ್ಯರಿಗೆ ಸೂಚಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಸದ್ಯ ಯಾವುದೇ ಕಾನೂನುಬಾಹಿರ ಮತಾಂತರ ನಡೆದಿರುವ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ಅಗತ್ಯ ಮಾಹಿತಿ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular