ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಆರೋಪಿ ಪುನೀತ್ ಸೇರಿದಂತೆ ಮೂವರು ಪ್ರಮುಖ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರೆಂಬ ಆರೋಪದ ಮೇರೆಗೆ ಬಂಧಿಸಲಾಗಿದ್ದು, ವಿಚಾರಣೆ ವೇಳೆ ಹೊಸ ಸಂಗತಿಗಳು ಬಹಿರಂಗವಾಗಿವೆ.
ಇನ್ನೂ ಪ್ರಮುಖ ಸಾಕ್ಷಿದಾರ ಸಂದೀಪ್ ತುಮಕೂರಿನ ಖಾಸಗಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಜೂನ್ 25ರಂದು ಆಕರ್ಷ್ ಎಂಬಾತ ಕರೆ ಮಾಡಿ ಮಾತನಾಡಬೇಕಿದೆ ಎಂದು ಹೇಳಿ ಭೇಟಿಗೆ ಕರೆದಿದ್ದಾನೆ ಎನ್ನಲಾಗಿದೆ.
ಬಳಿಕ ಕಾರಿನಲ್ಲಿ ಕೂರಿಸಿಕೊಂಡು ನ್ಯಾಯಾಲಯದಲ್ಲಿ ಏನು ಹೇಳಿದ್ದೀರಿ, ವಿಚಾರಣೆಯಲ್ಲಿ ಏನು ನಡೆದಿದೆ ಎಂಬ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಇದೇ ವೇಳೆ ವಕೀಲರೊಬ್ಬರು ವಾಟ್ಸ್ಆಪ್ ಕರೆ ಮೂಲಕ ಸಂಪರ್ಕಿಸಿ, ನ್ಯಾಯಾಲಯದಲ್ಲಿ ತಾವು ಹೇಳುವಂತೆ ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಅಲ್ಲದೆ, ರೇಣುಕಾಸ್ವಾಮಿ ಕೊಲೆಯಾದ ಮೂರು ದಿನಗಳ ಬಳಿಕ ತಾನು ಕೆಲಸ ಮಾಡುತ್ತಿದ್ದ ಬಾರ್‌ಗೆ ಪೊಲೀಸರು ಬಂದು ಸಿಸಿಟಿವಿ ಡಿವಿಆರ್ ವಶಪಡಿಸಿಕೊಂಡು ಸಹಿ ಮಾಡಿಸಿಕೊಂಡಿದ್ದರು. “ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಬೇಕು” ಎಂದು ಬೆದರಿಕೆ ಹಾಕಲಾಗಿದೆ ಎಂದು ಸಂದೀಪ್ ಆರೋಪಿಸಿದ್ದಾರೆ.
ಇನ್ನೊಂದೆಡೆ, ಬಂಧಿತ ಆರೋಪಿ ಪುನೀತ್ ವಿಚಾರಣೆ ವೇಳೆ ನನಗೆ ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರೂ ನನಗೆ ಏನನ್ನೂ ಹೇಳಿಕೊಟ್ಟಿಲ್ಲ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆ ಮುಂದುವರಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಪುನೀತ್ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಅವರ ಮೊಬೈಲ್ ಫೋನ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ್ದಾರೆ. ಡಿಜಿಟಲ್ ಸಾಕ್ಷ್ಯಾಧಾರಗಳ ಪರಿಶೀಲನೆ ಬಳಿಕ ಇನ್ನಷ್ಟು ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
ಪ್ರಮುಖ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಂಚಿನಲ್ಲಿ ಕೆಲ ನಿರ್ಮಾಪಕರ ಪಾತ್ರವೂ ಇರಬಹುದೆಂಬ ಶಂಕೆ ತನಿಖಾಧಿಕಾರಿಗಳಿಗೆ ವ್ಯಕ್ತವಾಗಿದ್ದು, ಈ ಸಂಬಂಧ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ಮೊಬೈಲ್‌ನಲ್ಲಿರುವ ಮಾಹಿತಿ ಮರುಪಡೆಯುವ (ರಿಟ್ರೀವ್) ಪ್ರಕ್ರಿಯೆಯ ಬಳಿಕ ಹೊಸ ಸಾಕ್ಷ್ಯಾಧಾರಗಳು ಸಿಕ್ಕರೆ ಪ್ರಕರಣ ಮತ್ತಷ್ಟು ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.



