ಶ್ಯಾಂಸುಂದರ್ ಜ್ಯೋಕರ್ ಶ್ಯಾಂ ಆಗಿದ್ದು ಹೇಗೆ..?
ಕೆಲವು ಕಲಾವಿದರನ್ನು ನಾವು ಯಾವ ಪರಿ ಒಂದು ಅವಗಣನೆಗೆ ಈಡುಮಾಡಿದ್ದೀವಿ ಅಂದ್ರೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವಂತಹ ಕಲಾವಿದರ ಬಗ್ಗೆ ನಮಗೆ ಒಂದು ಕನಿಷ್ಠ ಮಾಹಿತಿ ಕೂಡ ಇವತ್ತು ಲಭ್ಯವಿಲ್ಲದೆ ಇರೋ ರೀತಿಯಲ್ಲಿ ಪರಿಸ್ಥಿತಿ ಇದೆ. ಅಂತಹ ಕಲಾವಿದರಲ್ಲಿ ಒಬ್ಬರು ಜೋಕರ್ ಶ್ಯಾಮ್.
ಜೋಕರ್ ಶ್ಯಾಮ್ ಹುಟ್ಟಿದ್ದೆಲ್ಲಿ ಯಾವಾಗ ಹುಟ್ಟಿದ್ರು ಅವರ ಕುಟುಂಬದ ಪರಿಸ್ಥಿತಿ ಹೇಗಿತ್ತು ಈ ಯಾವ ವಿವರಗಳು ಲಭ್ಯವಿಲ್ಲ. ಆದರೆ ಅವರು ಒಬ್ಬ ರಂಗಭೂಮಿ ಕಲಾವಿದರು ಹಾಗಾಗಿ ರಂಗಭೂಮಿಯಲ್ಲಿ ಪಾತ್ರಗಳನ್ನು ಮಾಡ್ತಾ ಮಾಡ್ತಾ ಅವತ್ತಿನ ಎಲ್ಲಾ ಕಲಾವಿದರ ಹಾಗೆ ಅವರು ಸಹ ಚಲನಚಿತ್ರಗಳಲ್ಲಿ ಅವಕಾಶ ಸಿಗಬಹುದು ಅಂತ ತುಂಬಾ ಪ್ರಯತ್ನ ಪಡ್ತಾರೆ. ಸಣ್ಣ ಪುಟ್ಟ ಪಾತ್ರಗಳು ಸಿಕ್ತಾ ಇದ್ವು. ಒಂದು ಹಂತದಲ್ಲಿ ಯಾರ್ಯಾರೋ ನಮಗೆ ಅವಕಾಶ ಕೊಡಲ್ಲ ನಾವೇ ಯಾಕೆ ಒಂದು ಚಿತ್ರವನ್ನು ನಿರ್ಮಾಣ ಮಾಡಬಾರದು ಅಂತ 1964 ರಲ್ಲಿ ಶಿವಗಂಗೆ ಮಹಾತ್ಮೆ ಎನ್ನುವ ಒಂದು ಚಿತ್ರವನ್ನ ಕೆಲವು ಸ್ನೇಹಿತರ ಜೊತೆಯಲ್ಲಿ ಸೇರಿಕೊಂಡು ನಿರ್ಮಾಣ ಮಾಡೋದಕ್ಕೆ ಶ್ಯಾಮ್ ಸುಂದರ್ ಅವರು ಮುಂದಾಗ್ತಾರೆ ಅಂದ್ರೆ ಇದೇ ಜೋಕರ್ ಶ್ಯಾಮ್ ಅವರು. ಶ್ಯಾಮ್ ಸುಂದರ್ ಅವರು ಜೋಕರ್ ಶ್ಯಾಮ್ ಆದ ಬಗ್ಗೆ ಬಹಳ ಸ್ವಾರಸ್ಯಕರವಾದ ಕಥೆ ಇದೆ. ಆ ವಿಚಾರ ಮುಂದೆ ಪ್ರಸ್ತಾಪ ಆಗುತ್ತೆ.
ಶಿವಗಂಗೆ ಮಹಾತ್ಮೆ ಚಿತ್ರಕ್ಕೆ ರಾಜಕುಮಾರ್ ಅವರನ್ನ ನಾಯಕರನ್ನಾಗಿ ಆರಿಸಿಕೊಳ್ಳುತ್ತಾರೆ. ರಾಜಕುಮಾರ್ ಅವರ ಸ್ನೇಹಿತನ ಒಂದು ಪಾತ್ರ ಇರುತ್ತೆ. ಆ ಪಾತ್ರವನ್ನ ಮಾಡಬೇಕು ಅಂತ ಜೋಕರ್ ಶ್ಯಾಮ್ ಅವರಿಗೆ ತುಂಬಾ ಆಸೆ ಇರುತ್ತೆ. ತಾವೇ ನಿರ್ಮಾಪಕರಾದ್ದರಿಂದ ಆ ಒಂದು ಪಾತ್ರ ಸಿಗುತ್ತೆ ಅನ್ನುವ ನಂಬಿಕೆಯಲ್ಲಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಗೋವಿಂದಯ್ಯ ಅನ್ನುವ ಒಬ್ಬ ಅನುಭವಿಯನ್ನ ಮೊದಲ ಬಾರಿಗೆ ನಿರ್ದೇಶಕನನ್ನಾಗಿ ನೇಮಿಸಿಕೊಳ್ತಾರೆ. ಆದರೆ ಅಂತಹ ಒಬ್ಬ ಹೊಸ ನಿರ್ದೇಶಕರ ಕೈಯಲ್ಲಿ ಸಿದ್ಧ ಆಗ್ತಾ ಇರುವಂತ ಚಿತ್ರವನ್ನ ಯಾವುದೇ ಹಂಚಿಕೆದಾರರು ಮೊದಲೇ ಹಣವನ್ನು ಕೊಟ್ಟು ಕೊಂಡುಕೊಳ್ಳುವುದಕ್ಕೆ ಮುಂದೆ ಬರೋದಿಲ್ಲ. ನಿಧಾನವಾಗಿ ಚಿತ್ರದ ಒಂದು ಪ್ರಗತಿ ಕುಂಠಿತವಾಗುತ್ತೆ.
ಆ ಸಂದರ್ಭದಲ್ಲಿ ತಿಮ್ಮರಾಯಪ್ಪ ಅನ್ನುವ ಒಬ್ಬ ನಿರ್ಮಾಪಕರು ಬರುತ್ತಾರೆ. ಅವರು ಕೈ ಜೋಡಿಸಿ ಆ ಒಂದು ಚಿತ್ರ ಮುಂದುವರಿಯುತ್ತೆ. ಆದರೆ ಅಲ್ಲಿ ರಾಜಕುಮಾರ್ ಅವರ ಸ್ನೇಹಿತನ ಪಾತ್ರಕ್ಕೆ ವ್ಯಾಪಾರಿ ದೃಷ್ಟಿಯಿಂದಾಗಿ ಅವತ್ತಿಗೆ ಒಂದು ಯಶಸ್ವಿ ಜೋಡಿಯಾಗಿದ್ದಂತಹ ನರಸಿಂಹರಾಜು ಅವರನ್ನು ಕರೆಯಬೇಕು ಅಂತ ನಿರ್ದೇಶಕರು ನಿರ್ಮಾಪಕರು ತೀರ್ಮಾನ ಮಾಡುತ್ತಾರೆ. ಜೋಕರ್ ಶ್ಯಾಮ್ ಅವರಿಗೆ ತುಂಬಾ ಬೇಸರ ಆಗುತ್ತೆ ನಿರಾಸೆ ಆಗುತ್ತೆ. ಆದರೆ ಅವರು ಒಬ್ಬ ನಿರ್ಮಾಪಕರು ಹೇಳಿದ್ದನ್ನ ಕೇಳಲೇಬೇಕಾಗುತ್ತೆ ಹಾಗಾಗಿ ಅವರು ಸುಮ್ಮನಿರ್ತಾರೆ. ಕೊನೆಗೆ ನರಸಿಂಹರಾಜು ಅವರ ಕಾಲ್ ಶೀಟ್ ಸಿಕ್ಕದೇ ಇದ್ದಿದ್ದರಿಂದಾಗಿ ಆ ಪಾತ್ರ ರತ್ನಾಕರ್ ಅವರ ಪಾಲಾಗುತ್ತೆ. ಅಲ್ಲಿ ಒಂದು ಸೈನಿಕನ ಪಾತ್ರವನ್ನ ಜೋಕರ್ ಶ್ಯಾಮ್ ಅವರು ಮಾಡಬೇಕಾಗುತ್ತೆ.
ಜೋಕರ್ ಶ್ಯಾಮ್ ಬಂಗಾರದ ಮನುಷ್ಯ ಚಿತ್ರದಲ್ಲಿ ಒಬ್ಬ ಜಟಕ ಓಡಿಸುವ ಮುಸ್ಲಿಂ ಪಾತ್ರವನ್ನ ಮಾಡಿದ್ದಾರೆ. ಅವರಿಗೆ ಸಿಕ್ತಾ ಇದ್ದದ್ದೇ ಅಂತಹ ಪಾತ್ರಗಳು. ಮಾರ್ವಾಡಿ, ಸೇಟು ಪಾತ್ರ, ಜಟಕ ಓಡಿಸುವಂತಹ ಜಟಕ ಸಾಬಿಯ ಪಾತ್ರಗಳು. ಅವರ ಒಂದು ವಿಶಿಷ್ಟವಾದ ಧ್ವನಿ ಜೊತೆಗೆ ಆ ಉತ್ತರ ಭಾರತದವರ ಶೈಲಿಯಲ್ಲಿ ಅಥವಾ ಮುಸ್ಲಿಮರ ಶೈಲಿಯಲ್ಲಿ ಕನ್ನಡವನ್ನು ಬಹಳ ಸೊಗಸಾಗಿ ಜೋಕರ್ ಶ್ಯಾಮ್ ಅವರು ಮಾಡ್ತಾ ಇದ್ರು. ಜೊತೆಗೆ ಹಾಸ್ಯ ಕಲಾವಿದನಿಗೆ ಇರಬೇಕಾದಂತಹ ದೇಹಭಾಷೆ ಜೊತೆಗೆ ವಿಶಿಷ್ಟವಾದಂತಹ ಧ್ವನಿ ಇವೆಲ್ಲವೂ ಅವರಿಗೆ ಸಿದ್ಧಿಸಿತ್ತು. ಹಾಗಾಗಿ ಅವರಿಗೆ ಅಂತಹ ಪಾತ್ರಗಳೇ ಆರಿಸಿಕೊಂಡು ಬರ್ತಾ ಇತ್ತು.
ಜೋಕರ್ ಶ್ಯಾಮ್ ಅನ್ನುವ ಹೆಸರು ಶ್ಯಾಮ್ ಸುಂದರ್ ಅವರಿಗೆ ಹೇಗೆ ಬಂತು ಅಂದ್ರೆ ಬಂಗಾರದ ಮನುಷ್ಯ ಚಿತ್ರದ ಚಿತ್ರೀಕರಣ ಚಿಕ್ಕಮಗಳೂರು ಸುತ್ತಮುತ್ತ ನಡೀತಾ ಇದ್ದಾಗ ಒಂದು ಸಂದರ್ಭದಲ್ಲಿ ಸ್ಥಳೀಯರೆಲ್ಲರೂ ಸೇರಿ ಅಲ್ಲಿ ಚಿತ್ರತಂಡಕ್ಕೆ ಒಂದು ಸತ್ಕಾರವನ್ನು ಮಾಡ್ತಾರೆ. ಆಗ ರಾಜಕುಮಾರ್ ಅವರೇ ಸ್ವತಃ ಎಲ್ಲ ಕಲಾವಿದರನ್ನ ಜನಗಳಿಗೆ ಪರಿಚಯ ಮಾಡಿಕೊಡುತ್ತಾರೆ. ಹಾಗೆ ಪರಿಚಯ ಮಾಡಿಕೊಡುವಾಗ ಶ್ಯಾಮ್ ಸುಂದರ್ ಅವರ ಹೆಸರು ಬಂದಾಗ ಇವರು ಒಂದು ರೀತಿ ಜೋಕರ್ ಇದ್ದ ಹಾಗೆ. ಏಕೆಂದರೆ ಇಸ್ಪೀಟ್ ಆಟದಲ್ಲಿ ಜೋಕರ್ ಕಾರ್ಡನ್ನು ಎಲ್ಲಿ ಬೇಕಾದರೂ ಬಳಸಬಹುದೋ.. ಅದೇ ರೀತಿ ಕೆಲವು ಚಿತ್ರಗಳಲ್ಲಿ ಈ ಪಾತ್ರಕ್ಕೆ ಯಾರನ್ನು ಹಾಕೋಣ ಅಂತ ಯೋಚನೆ ಬಂದ ತಕ್ಷಣ ಅಲ್ಲಿ ಹೊಳೀತಾ ಇದ್ದದ್ದೇ ಶ್ಯಾಮ್ ಸುಂದರ್ ಅವರ ಹೆಸರು. ಹಾಗಾಗಿ ರಾಜಕುಮಾರ್ ಅವರು ಅವರನ್ನು ಜೋಕರ್ ಶ್ಯಾಮ್ ಅಂತ ಕರೀತಾರೆ. ಅಲ್ಲಿಂದ ಮುಂದೆ ತಮ್ಮ ಹೆಸರನ್ನ ಜೋಕರ್ ಶ್ಯಾಮ್ ಅಂತಾನೆ ಬದಲಾಯಿಸಿಕೊಳ್ತಾರೆ.
ಕೃಷ್ಣದೇವರಾಯ ಚಿತ್ರವನ್ನು ನೋಡಿದರೆ ಜೋಕರ್ ಶ್ಯಾಮ್ ಅವರು ಅಲ್ಲಿ ಏಳು ಪಾತ್ರಗಳನ್ನು ಮಾಡಿದ್ದಾರೆ. ಅಂದರೆ ದ್ವಿಪಾತ್ರ, ತ್ರಿಪಾತ್ರ ಆ ರೀತಿಯ ಪಾತ್ರಗಳಲ್ಲ. ವೇಷವನ್ನು ಬದಲಿಸಿಕೊಂಡು ಬೇರೆ ಬೇರೆ ಪಾತ್ರಗಳನ್ನು ಒಬ್ಬನೇ ಕಲಾವಿದರ ಕೈಯಲ್ಲಿ ಮಾಡಿಸುವಂತಹ ಪಾತ್ರ.
ಜೋಕರ್ ಶ್ಯಾಮ್ ರಾಜಕುಮಾರ್ ಅವರ ಜೊತೆಗಿನ ಚಿತ್ರಗಳೇ ಹೆಚ್ಚಾಗಿ ಇಲ್ಲಿ ಕಾಣಿಸಿಕೊಂಡಿದೆ. ಹಾಗಂತ ಅವರು ಬೇರೆ ಚಿತ್ರಗಳಲ್ಲಿ ಅಭಿನಯಿಸಿಲ್ಲ ಅಂತ ಅಲ್ಲ. ಎಲ್ಲ ಕಲಾವಿದರ ಜೊತೆಯಲ್ಲೂ ಅಭಿನಯಿಸುತ್ತ ಇದ್ದರು. ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ ಲೋಕೇಶ್ ಅಭಿನಯಿಸಿದಂತ ಭೂತಯ್ಯನ ಮಗ ಅಯ್ಯು ಚಿತ್ರದ ಒಂದು ಊಟದ ಸನ್ನಿವೇಶ ಇವತ್ತಿಗೂ ಕನ್ನಡಿಗರು ಮರೆಯುತ್ತಿಲ್ಲ. ಆ ಸನ್ನಿವೇಶದಲ್ಲಿ ಕೂಡ ಜೋಕರ್ ಶ್ಯಾಮ್ ಅವರಿದ್ದಾರೆ. ಅಲ್ಲಿ ದಿನೇಶ್ ಅವರು ಬೆಳಗ್ಗೆ ಎದ್ದ ಕೂಡಲೇ ಧೀರೇಂದ್ರ ಗೋಪಾಲ್, B M ವೆಂಕಟೇಶ್, ಬಾಲಕೃಷ್ಣ ಇವರನ್ನೆಲ್ಲಾ ಕಟ್ಟಿಕೊಂಡು ಆಚಾರಿ ಮನೆಗೆ ಹೋಗೋಣ ಅಂತ ಹೇಳಿ ಬಂಗಿ ಸೇದುವುದಕ್ಕೆ ಆಚಾರಿ ಮನೆಗೆ ಬರ್ತಾರಲ್ಲ, ಅಲ್ಲಿ ಚಿನ್ನದ ಆಚಾರಿಯ ಕೆಲಸದ ಒಂದು ಪಾತ್ರವನ್ನ ಜೋಕರ್ ಶ್ಯಾಮ್ ಅವರೇ ನಿರ್ವಹಣೆ ಮಾಡಿರೋದು. ಮುಂದೆ ಅವರು City ಗೆ ಬಂದು ಅಲ್ಲಿ ಆ Hotel ನಲ್ಲಿ ಒಂದು ಊಟದ Ticket ತಗೊಂಡು ನಾಲ್ಕು ಜನ ಊಟ ಮಾಡುವಂತ ಒಂದು ಸನ್ನಿವೇಶದಲ್ಲಿ ಜೋಕರ್ ಶ್ಯಾಮ್ ಅವರು ಇದ್ದಾರೆ. ಹೀಗೆ ಜೋಕರ್ ಶ್ಯಾಮ್ ಅವರ ಮುಖ ಹಾಗೂ ಅವರ ಪಾತ್ರಗಳು ನಮಗೆ ಪರಿಚಿತ.
ಅವರ ಬಗ್ಗೆ ಇದಕ್ಕಿಂತ ಹೆಚ್ಚು ವಿವರಗಳು ಲಭ್ಯವಿಲ್ಲ. ರಾಜಕುಮಾರ್ ಅವರ ಜೊತೆಗೆ ಸನಾದಿ ಅಪ್ಪಣ್ಣ, ರಾಜಾ ನನ್ನ ರಾಜ, ಬಡವರ ಬಂಧು, ಪ್ರೇಮದ ಕಾಣಿಕೆ, ಈ ಚಿತ್ರಗಳಲ್ಲೆಲ್ಲಾ ಜೋಕರ್ ಶ್ಯಾಮ್ ಅವರ ಪಾತ್ರವನ್ನು ನಾವು ನೋಡಿದ್ದೀವಿ. ಇನ್ನು ದಾರಿ ತಪ್ಪಿದ ಮಗ ಚಿತ್ರದಲ್ಲಿ ಕಳ್ಳ ಸನ್ಯಾಸಿಯ ರೂಪದಲ್ಲಿ ಬರುವ ರಾಜಕುಮಾರ್ ಅವರ ಶಿಷ್ಯರ ಒಂದು ಗುಂಪಿನಲ್ಲಿ ಜೋಕರ್ ಶ್ಯಾಮ್ ಅವರು ಇದ್ದಾರೆ. ಹೀಗೆ ಜೋಕರ್ ಶ್ಯಾಮ್ ಅವರನ್ನು ಯಾವ ಯಾವ ಚಿತ್ರಗಳಲ್ಲಿ ಗುರುತಿಸಬಹುದು ಅನ್ನೋದಕ್ಕೆ ಈ ಚಿತ್ರಗಳ ಕೊಟ್ಟಿದ್ದೇವೆ. ಇನ್ನು ಅವರ ಪಾತ್ರ, ಅವರ ಮುಖಭಾವ ಇವು ಯಾವತ್ತೂ ನಮ್ಮ ಮನಸ್ಸಿನಿಂದ ಮರೆಯಾಗಲ್ಲ. ಅವರು 1977 ರಲ್ಲಿ ವಿಜಯಚಿತ್ರ ಪತ್ರಿಕೆಗೆ ಒಂದು ಸಂದರ್ಶನವನ್ನು ಕೊಟ್ಟಾಗ ಅಲ್ಲಿ ನಿರ್ಮಾಪಕರಾಗಿ ತಾವು ಅನುಭವಿಸಿದಂತಹ ಕಷ್ಟ, ರಾಜಕುಮಾರ್ ಅವರ ಸ್ನೇಹಿತನ ಪಾತ್ರ ಮಾಡಬೇಕಾಗಿದ್ದವರು ಕೊನೆಗೆ ಒಂದು ಒಬ್ಬ ಸೈನಿಕನ ಪಾತ್ರವನ್ನು ಮಾಡಿದ್ದು, ಆಗ ಆದಂತಹ ನಿರಾಸೆ ಜೊತೆಗೆ ರಾಜಕುಮಾರ್ ಅವರು ತಮಗೆ ಹೆಸರಿಟ್ಟಿದ್ದು, ಈ ಎಲ್ಲಾ ಸಂಗತಿಗಳನ್ನು ಆ ಒಂದು ಸಂದರ್ಶನದಲ್ಲಿ ಹೇಳಿಕೊಳ್ಳುತ್ತಾರೆ. ಅದಾದ ಎರಡೇ ತಿಂಗಳಿಗೆ, ಅಂದರೆ 1977 ನೇ ಇಸವಿ ನವೆಂಬರ್ ತಿಂಗಳ ಹನ್ನೆರಡನೇ ತಾರೀಕು ಕ್ಯಾನ್ಸರ್ ನಿಂದಾಗಿ ಅವರು ಆಂಧ್ರಪ್ರದೇಶದಲ್ಲಿ ಒಂದು ಚಿತ್ರೀಕರಣಕ್ಕೆ ಹೋಗಿದ್ದಾಗ ಅಲ್ಲಿ ಮರಣವನ್ನು ಹೊಂದಿದ್ದರು.



