ಮಂಗಳೂರು: ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳಿಗೆ ಕಡಿಮೆ ವೆಚ್ಚದಲ್ಲಿ ತೂಗು ಸೇತುವೆಗಳನ್ನು ನಿರ್ಮಿಸಿ ಸಾವಿರಾರು ಜನರ ಬದುಕಿಗೆ ಸಂಪರ್ಕದ ಸೇತುವೆಯಾದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಇಂದು ನಿಧನರಾದರು. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಸುಳ್ಯ ತಾಲೂಕಿನ ಅರಂಬೂರು ಗ್ರಾಮದ ನಿವಾಸಿಯಾಗಿದ್ದ ಡಾ. ಗಿರೀಶ್ ಭಾರದ್ವಾಜ್ ಅವರು 1989ರಲ್ಲಿ ತಮ್ಮ ಸ್ವಗ್ರಾಮದ ಪಯಸ್ವಿನಿ ನದಿಗೆ ಅಡ್ಡಲಾಗಿ ಮೊದಲ ಕಡಿಮೆ ವೆಚ್ಚದ ತೂಗು ಸೇತುವೆ ನಿರ್ಮಿಸುವ ಮೂಲಕ ವಿಶಿಷ್ಟ ಸೇವಾ ಪಯಣ ಆರಂಭಿಸಿದ್ದರು. ನಂತರ ಕರ್ನಾಟಕ ಸೇರಿದಂತೆ ಕೇರಳ, ಒಡಿಶಾ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ 120ಕ್ಕೂ ಹೆಚ್ಚು ಪರಿಸರ ಸ್ನೇಹಿ ತೂಗು ಸೇತುವೆಗಳನ್ನು ನಿರ್ಮಿಸಿ ಅಪಾರ ಜನಮನ್ನಣೆ ಗಳಿಸಿದರು.
ದುರ್ಗಮ ಕಾಡುಗಳು, ನದಿ ದಾಟಲು ದೋಣಿಯನ್ನೇ ಅವಲಂಬಿಸಿದ್ದ ಹಳ್ಳಿಗಳಿಗೆ ಅವರ ಸೇತುವೆಗಳು ಜೀವನಾಡಿಯಾಗಿ ಪರಿಣಮಿಸಿದ್ದವು. ಗ್ರಾಮೀಣ ಅಭಿವೃದ್ಧಿಗೆ ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2017ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ವಿವಿಧ ಗಣ್ಯರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



