Saturday, July 11, 2026
Google search engine

Homeರಾಜ್ಯ11 ದಿನಗಳ ಅದ್ಧೂರಿ ಮೈಸೂರು ದಸರಾ ; ಅ.21ಕ್ಕೆ ಜಂಬೂ ಸವಾರಿ : ಸಿಎಂ ಡಿಕೆ...

11 ದಿನಗಳ ಅದ್ಧೂರಿ ಮೈಸೂರು ದಸರಾ ; ಅ.21ಕ್ಕೆ ಜಂಬೂ ಸವಾರಿ : ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು : ನಾಡಹಬ್ಬ ಮೈಸೂರು ದಸರಾವನ್ನು ಈ ಬಾರಿ 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಕರ್ನಾಟಕದ ವಿವಿಧ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಹೊಸ ಕಾರ್ಯಕ್ರಮಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ನಡೆದ ದಸರಾ-2026 ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಅವರು, ಆಗಸ್ಟ್ 26ರಂದು ಬೆಳಗ್ಗೆ 10 ಗಂಟೆಗೆ ಗಜಪೂಜೆ ನಡೆಯಲಿದ್ದು, ಅಕ್ಟೋಬರ್ 11ರಂದು ಬೆಳಗ್ಗೆ 11.50ಕ್ಕೆ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಗುವುದು. ಹಾಗೂ ಅಕ್ಟೋಬರ್ 21ರಂದು ಮಧ್ಯಾಹ್ನ 1.30ಕ್ಕೆ ಜಂಬೂಸವಾರಿ ಹಾಗೂ ನಂದಿ ಪೂಜೆ ನಡೆಯಲಿದ್ದು, ಸಂಜೆ 4.10ಕ್ಕೆ ಜಂಬೂಸವಾರಿಗೆ ಪುಷ್ಪಾರ್ಚನೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಇನ್ನೂ ದಸರಾ ಆಯೋಜನೆಗಾಗಿ ಶೀಘ್ರದಲ್ಲೇ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ಈ ಬಾರಿ ದಸರಾ ಅಂಗವಾಗಿ ಏರ್‌ಶೋ ಆಯೋಜಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಲಹೆ ಬಂದಿದ್ದು, ಅದನ್ನೂ ಪರಿಶೀಲಿಸಲಾಗುವುದು. ದಸರಾ ಉದ್ಘಾಟಕರ ಆಯ್ಕೆ ಕುರಿತು ಅಂತಿಮ ನಿರ್ಧಾರವನ್ನು ಚರ್ಚಿಸಿ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಮೈಸೂರು ದಸರಾ ರಾಜ್ಯದ ಹೆಮ್ಮೆ ಮತ್ತು ಐತಿಹಾಸಿಕ ಸಾಂಸ್ಕೃತಿಕ ಉತ್ಸವವಾಗಿದ್ದು, ಪ್ರತಿವರ್ಷ ಹೊಸ ಆಲೋಚನೆಗಳು ಹಾಗೂ ಆವಿಷ್ಕಾರಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಬಾರಿಯೂ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಕಾರ್ಯಕ್ರಮಗಳನ್ನು ರಾಜ್ಯದ ಸಂಸ್ಕೃತಿಗೆ ಹೊಂದುವಂತೆ ರೂಪಿಸಲಾಗುವುದು. ಬರಗಾಲದ ನೆಪದಲ್ಲಿ ದಸರಾದ ವೈಭವ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ. ಸಂಪ್ರದಾಯವನ್ನು ಉಳಿಸಿಕೊಂಡೇ ಹೊಸತನವನ್ನು ಪರಿಚಯಿಸುವುದು ನಮ್ಮ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.

ಕಳೆದ ಮೂರು ವರ್ಷಗಳಿಂದ ಮೈಸೂರು ನಗರವನ್ನು ಚೆಸ್ಕಾಂ ವತಿಯಿಂದ ದೀಪಾಲಂಕಾರ ಮಾಡಲಾಗುತ್ತಿದೆ. ಶಕ್ತಿ ಯೋಜನೆಯಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಈ ಬಾರಿ ಸಹ ರಾಷ್ಟ್ರಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆದಿದೆ. ಮೈಸೂರು ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳಿಂದ ಹಲವು ಸಲಹೆಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಗೋಲ್ಡನ್ ಪಾಸ್ ವಿತರಣೆ, ಭದ್ರತಾ ವ್ಯವಸ್ಥೆ ಹಾಗೂ ಪ್ರವಾಸಿಗರ ಅನುಕೂಲದ ಬಗ್ಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಮೈಸೂರಿನ ಆತಿಥ್ಯ ಮತ್ತು ದಸರಾ ವೈಭವಕ್ಕೆ ಯಾವುದೇ ಧಕ್ಕೆಯಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

RELATED ARTICLES
- Advertisment -
Google search engine

Most Popular