Monday, July 13, 2026
Google search engine

Homeರಾಜ್ಯಸುದ್ದಿಜಾಲಕ್ರೀಡೆಯ ಮೂಲಕ ಯುವಕರ ಸಂಘಟನೆಗೆ ಬಿಜೆಪಿ ಮುಂದಾಳತ್ವ : ನಮೋ-ಬಿಎಸ್‌ವೈ ಟೂರ್ನಿ ಆರಂಭ

ಕ್ರೀಡೆಯ ಮೂಲಕ ಯುವಕರ ಸಂಘಟನೆಗೆ ಬಿಜೆಪಿ ಮುಂದಾಳತ್ವ : ನಮೋ-ಬಿಎಸ್‌ವೈ ಟೂರ್ನಿ ಆರಂಭ

ಗುಡಿಬಂಡೆ : ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೊಸ ವೇಗ ದೊರೆತಿದ್ದು, ರಾಜ್ಯದಲ್ಲಿಯೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು ಹೇಳಿದರು.

ತಾಲೂಕಿನ ವರ್ಲಕೊಂಡ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾವಧಿಯ ಸೇವೆ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ಅಂಗವಾಗಿ ಆಯೋಜಿಸಿದ್ದ ನಮೋ-ಬಿಎಸ್‌ವೈ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿ, ರೈತರ ಕಲ್ಯಾಣ, ಮಹಿಳಾ ಸಬಲೀಕರಣ, ಯುವಕರಿಗೆ ಉದ್ಯೋಗಾವಕಾಶ, ಡಿಜಿಟಲ್ ಭಾರತ ಹಾಗೂ ಆತ್ಮನಿರ್ಭರ ಭಾರತ ಸೇರಿದಂತೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ಅಭಿವೃದ್ಧಿಯಲ್ಲಿ ಈ ಯೋಜನೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು. ಅವರ ಆಡಳಿತದ ಅವಧಿಯ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸೂಚನೆಯಂತೆ ಆಯೋಜಿಸಲಾಗಿರುವ ಈ ಟೂರ್ನಿಯನ್ನು ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಸಲಾಗುತ್ತಿದ್ದು, ಒಟ್ಟು 36 ಗ್ರಾಮ ಪಂಚಾಯಿತಿಗಳಲ್ಲಿ ಹಂತ ಹಂತವಾಗಿ ಪಂದ್ಯಾವಳಿ ನಡೆಯಲಿದ್ದು, ವಿಜೇತರಿಗೆ ಪ್ರಥಮ ಬಹುಮಾನ ₹15 ಸಾವಿರ, ದ್ವಿತೀಯ ₹10 ಸಾವಿರ ಹಾಗೂ ತೃತೀಯ ₹5 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.

ಗ್ರಾಮ ಪಂಚಾಯಿತಿ ಮಟ್ಟದ ಪಂದ್ಯಾವಳಿಗಳ ಬಳಿಕ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಬೃಹತ್ ಟೂರ್ನಿ ಆಯೋಜಿಸಲಾಗುವುದು. ಕ್ಷೇತ್ರ ಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಕ್ಕೆ ₹2 ಲಕ್ಷ, ದ್ವಿತೀಯ ಸ್ಥಾನಕ್ಕೆ ₹1.5 ಲಕ್ಷ, ತೃತೀಯ ಸ್ಥಾನಕ್ಕೆ ₹1 ಲಕ್ಷ ಹಾಗೂ ನಾಲ್ಕನೇ ಸ್ಥಾನಕ್ಕೆ ₹50 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು. ಈ ಟೂರ್ನಿ ರಾಜ್ಯದ ಗಮನವನ್ನು ಬಾಗೇಪಲ್ಲಿಯತ್ತ ಸೆಳೆಯುವ ಉದ್ದೇಶ ಹೊಂದಿದೆ ಎಂದು ಸಿ.ಮುನಿರಾಜು ತಿಳಿಸಿದರು.

ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರೇಗೌಡ ಮಾತನಾಡಿ, ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಇಂತಹ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಶಿಸ್ತು, ನಾಯಕತ್ವ ಹಾಗೂ ತಂಡದ ಮನೋಭಾವ ಬೆಳೆಸಲು ಸಹಕಾರಿಯಾಗುತ್ತದೆ ಎಂದರು. ಯುವಕರು ಮೊಬೈಲ್ ಬಳಕೆಗೆ ಸೀಮಿತರಾಗದೆ ಕ್ರೀಡೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಗುಡಿಬಂಡೆ ತಾಲೂಕು ಅಧ್ಯಕ್ಷ ಗಂಗಿರೆಡ್ಡಿ, ಬಾಗೇಪಲ್ಲಿ ಅಧ್ಯಕ್ಷ ಪ್ರತಾಪ್, ಮುಖಂಡರಾದ ಬೈರಾರೆಡ್ಡಿ, ಅಂಬರೀಶ್, ಬಾಬು, ಮಧುಸೂಧನರೆಡ್ಡಿ, ಮಣಿ, ಪ್ರೆಸ್ ಶಿವಪ್ಪ, ರಾಮಪ್ಪ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular