ಚಿತ್ರದುರ್ಗ: ಅಂತಃಶಕ್ತಿ ಜಾಗೃತಗೊಳಿಸಿ ಉತ್ತಮ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜಗತ್ತಿಗೆ ಮಾದರಿಯಾಗಬಹುದು. ಅದಕ್ಕೆ ಮಹಾತ್ಮಾ ಗಾಂಧೀಜಿಯವರೇ ಉತ್ತಮ ನಿದರ್ಶನ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ 154ನೇ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಭೌತಿಕ ಲಕ್ಷಣಗಳನ್ನು ಆಧರಿಸಿ ಜಗತ್ತು ನಮ್ಮನ್ನು ಗೌರವಿಸುತ್ತದೆ ಎಂಬುದು ಸುಳ್ಳು. ಗಾಂಧೀಜಿಯವರು ತುಂಡು ಬಟ್ಟೆ ತೊಟ್ಟು, ಕೈಯಲ್ಲಿ ಊರುಗೋಲು ಹಿಡಿದು ದೇಶ ಸುತ್ತಿ, ಅವರ ತತ್ವ ಹಾಗೂ ಆಲೋಚನೆಗಳಿಂದ ಭಾರತೀಯರನ್ನು ಆಕರ್ಷಿಸಿ ಬ್ರಿಟೀಷರ ವಿರುದ್ಧ ಒಗ್ಗೂಡಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ದೈಹಿಕ ಎತ್ತರದ ಬಗ್ಗೆ ಕೀಳರಿಮೆ ಹೊಂದದೆ, ದೇಶದ ಎರಡನೇ ಪ್ರಧಾನ ಮಂತ್ರಿಯಾಗಿ ದೇಶವನ್ನು ಸಂಕಷ್ಟ ಸಮಯದಲ್ಲಿ ಮುಂದುವರೆಸಿದರು. ಈ ಇಬ್ಬರೂ ಮಹನೀಯರು ಅವರೊಳಗಿನ ಅಂತಃಶಕ್ತಿ ಪ್ರತೀಕವಾಗಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ನಮ್ಮಲ್ಲಿ ಅಂತಃಶಕ್ತಿಯ ಕೊರತೆಯಿದ್ದಾಗ ನಾವು ಬಾಹ್ಯವಾಗಿ ಒಳ್ಳೆಯ ಬಟ್ಟೆ, ಆಭರಣ ಅಥವಾ ಅಲಂಕಾರದಿಂದ ಸಮಾಜದಲ್ಲಿ ನಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಗಾಂಧೀಜಿ ಎಂದಿಗೂ ತಮ್ಮ ಬಾಹ್ಯ ನೋಟದ ಬಗ್ಗೆ ತಲೆ ಕೆಡಿಸಿಕೊಳ್ಳದೇ, ತಮ್ಮ ಅಂತಃಶಕ್ತಿಯನ್ನು ಸದಾ ಹೆಚ್ಚಿಸಿಕೊಳ್ಳುವಲ್ಲಿ ತೊಡಗಿದ್ದರು. ತಮ್ಮ ತತ್ವ ವಿಚಾರಗಳಿಂದ ದೇಶದ ಕೋಟ್ಯಾಂತರ ಜನರನ್ನು ಮುನ್ನಡೆಸಿದರು. ಹಾಗೆಯೇ ದೇಶದ ಪ್ರಧಾನಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಎಂದಿಗೂ ತಮ್ಮ ದೈಹಿಕ ಎತ್ತರದ ಬಗ್ಗೆ ಕೀಳರಿಮೆ ಹೊಂದಿರಲಿಲ್ಲ, ಬದಲಾಗಿ ತಮ್ಮ ಋಣಾತ್ಮಕ ಅಂಶಗಳನ್ನು ಮರೆತು, ಅದನ್ನೇ ಧನಾತ್ಮಕ ಅಂಶವಾಗಿಸುವತ್ತ ಚಿಂತಿಸಿದರು. ಇದರಿಂದ ಜೀವನದಲ್ಲಿ ಉತ್ತಮ ಯಶಸ್ಸು ಗಳಿಸಿದರು. ಶಾಸ್ತ್ರಿಯವರ ಧೈರ್ಯ, ದೇಶಪ್ರೇಮ, ಪ್ರಾಮಾಣಿಕತೆಯನ್ನು ಇಡೀ ದೇಶ ಕೊಂಡಾಡುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಅವರು ಸತ್ಯಾಗ್ರಹ ಹಾಗೂ ಅಹಿಂಸೆಯ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಗಾಂಧೀಜಿ ಅವರ ಜೀವನವೇ ಜಗತ್ತಿಗೆ ಒಂದು ಸಂದೇಶವಾಗಿದೆ. ಗಾಂಧೀಜಿ ಅವರ ತತ್ವಾದರ್ಶಗಳನ್ನು ನಿತ್ಯಜೀವನದಲ್ಲಿ ಮೈಗೂಡಿಸಿಕೊಂಡು ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಬೇಕು. ದಾರ್ಶನಿಕರು, ಮಹನೀಯರ ಆಶಯದಂತೆ ಪ್ರತಿಯೊಬ್ಬರು ಅಹಿಂಸಾ ತತ್ವ ಪಾಲಿಸುವುದರ ಜತೆಗೆ ಸತ್ಯ, ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದರು.
ಪ್ರಾಮಾಣಿಕವಾಗಿ ದೇಶವನ್ನು ಮುನ್ನೆಡೆಸಿದ ಕೀರ್ತಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರಿಗೆ ಸಲ್ಲುತ್ತದೆ. ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಸಂತಜೋಸೆಫ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು. ಮೀನಾಕ್ಷಿ ಭಟ್, ಆರ್.ಎಂ.ಅಮೃತ, ತೇಜಸ್ವಿನಿ ಮತ್ತು ಸಂಗಡಿಗರು ವೈಷ್ಣವ ಜನತೋ ಹಾಗೂ ರಘುಪತಿ ರಾಘವ ರಾಜಾರಾಂ, ರಾಮ್‍ಧುನ್ ಗೀತಗಾಯನ ನಡೆಸಿಕೊಟ್ಟರು.
