ಬೆಂಗಳೂರು: ಕಳೆದ ತಿಂಗಳಾಂತ್ಯದಲ್ಲಿ ರಾಜ್ಯದಾದ್ಯಂತ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಏರ್ಪಡಿಸಿದ್ದ ʼಗೃಹಲಕ್ಷ್ಮಿʼ ಯೋಜನೆಗೆ ಸಂಬಂಧಿಸಿದ ದಾಖಲಾತಿಗಳ ಪರಿಶೀಲನೆ ಶಿಬಿರದಲ್ಲಿ ಸುಮಾರು 4 ಲಕ್ಷ ಗ್ರಾಮೀಣ ಮಹಿಳೆಯರು ಆಧಾರ್ ಕಾರ್ಡ್ ಪುನರ್‌ಪರಿಶೀಲನೆ ಹಾಗೂ ಹೊಸದಾಗಿ ಅಂಛೆ ಕಚೇರಿಯ ಐಪಿಪಿಬಿ ಖಾತೆಗಳನ್ನು ಆರಂಭಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯದ 3,48,386 ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆಧಾರ್ ಕಾರ್ಡ್‌ಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಿದರು. ಮೊದಲ ದಿನ 91,681 ಮಂದಿ, ಎರಡನೆಯ ದಿನ 1,31,638 ಮಂದಿ ಹಾಗೂ ಮೂರನೆಯ ದಿನ 1,25,067 ಮಂದಿ ಮಹಿಳೆಯರು ರಾಜ್ಯದ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ನಡೆದ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆಧಾರ್ ಕಾರ್ಡ್‌ಗಳನ್ನು ಪರಿಶೀಲನೆಗೆ ಒಳಪಡಿಸಿದರು. ಇದೇ ಅವಧಿಯಲ್ಲಿ 32,201 ಮಂದಿ ಮಹಿಳೆಯರು ಶಿಬಿರಗಳಲ್ಲಿ ಪಾಲ್ಗೊಂಡು ಹೊಸದಾಗಿ ಅಂಛೆ ಕಚೇರಿಯ ಐಪಿಪಿಬಿ ಖಾತೆಗಳನ್ನು ಆರಂಭಿಸಿದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಪುನರ್ ಪರಿಶೀಲನೆಗೆ ಒಳಪಟ್ಟ ಆಧಾರ್ ಕಾರ್ಡ್ ಹಾಗೂ ಹೊಸ ಅಂಛೆ ಕಚೇರಿ ಖಾತೆಗಳನ್ನು ಆಧರಿಸಿ ಅರ್ಜಿಗಳನ್ನು ಪರಿಶೀಲಿಸುತ್ತಿದೆ ಎಂದೂ ಸಚಿವರು ಹೇಳಿದ್ದಾರೆ.