ಬೆಂಗಳೂರು : ರಾಜ್ಯ ಸರಕಾರದ ಮನವಿ ಮೇರೆಗೆ ತೊಗರಿ ಮತ್ತು ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಪ್ರತಿ ಕ್ವಿಂಟಲ್ಗೆ ತೊಗರಿಗೆ ೭,೫೫೦ ರೂ. ಹಾಗೂ ಕಡಲೆಗೆ ೫,೬೫೦ ರೂ.ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ತೊಗರಿ ಬೆಳೆಯನ್ನು ೧೫.೦೨ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಲಾಗುತ್ತಿದ್ದು, ಅಂದಾಜು ೧೧.೯೬ಲಕ್ಷ ಮೆಟ್ರಿಕ್ಟನ್ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ ಬೆಳಗಾವಿ, ಬಳ್ಳಾರಿ, ವಿಜಯನಗರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು.
ರಾಜ್ಯ ಸರಕಾರದ ಕೋರಿಕೆಯ ಮೇರೆಗೆ ಕೇಂದ್ರ ಸರಕಾರವು ೩,೦೬,೧೫೦ ಮೆಟ್ರಿಕ್ ಟನ್ ಖರೀದಿಗೆ ಅನುಮತಿ ನೀಡಿದೆ. ಪ್ರಸ್ತುತ ಕಡಲೆಯನ್ನು ೧೦.೦೩ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಅಂದಾಜು ೬.೬೩ ಲಕ್ಷ ಮೆಟ್ರಿಕ್ಟನ್ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಧಾರವಾಡ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಗದಗ, ಬೆಳಗಾವಿ, ವಿಜಯಪುರ ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೋಟೆ, ದಾವಣಗೆರೆ, ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು.
ಬೆಂಬಲ ಬೆಲೆಯಲ್ಲಿ ೯೬,೪೯೮ ಮೆಟ್ರಿಕ್ ಟನ್ ಕಡಲೆ ಖರೀದಿ ಮಾಡಲಾಗುವುದು. ಕೇಂದ್ರ ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ನೀಡುತ್ತಿದ್ದಂತೆ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದ್ದಾರೆ.