Thursday, February 5, 2026
Google search engine

Homeಅಪರಾಧಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ : ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾ

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ : ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾ

ಚಾಮರಾಜನಗರ : ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ನಡೆದ ವಿಷಪ್ರಸಾದ ದುರಂತ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.

ವಿಷಪ್ರಸಾದ ದುರಂತದಲ್ಲಿ ೧೭ ಜನರು ಮೃತಪಟ್ಟ ಪ್ರಕರಣದಲ್ಲಿ ಕಳೆದ ೭ ವರ್ಷಗಳಿಂದಲೂ ಜೈಲಿನಲ್ಲಿರುವ ಆರೋಪಿಗಳಾದ ಮಾದೇಶ, ಅಂಬಿಕಾ, ಹಾಗೂ ದೊಡ್ಡಯ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯನ್ನು ಪರಿಶೀಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

೨೦೧೮ರ ಡಿ.೧೪ ರಂದು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ನಡೆದ ವಿಷಪ್ರಸಾದ ದುರಂತದಲ್ಲಿ ೧೭ ಭಕ್ತರು ಮೃತಪಟ್ಟು ೧೧೭ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು. ದೇಗುಲದ ಆಡಳಿತ ಮಂಡಳಿಯ ಅಧಿಕಾರ ಹಿಡಿಯುವ ಸಲುವಾಗಿ ಒಂದು ಬಣದ ವಿಷಕಾರಿ ಸಂಚಿನಿಂದ ಘಟನೆ ನಡೆದಿತ್ತು.

ಸಾಲೂರು ಮಠದ ಅಂದಿನ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ, ಮಾದೇಶ, ಅಂಬಿಕಾ ಹಾಗೂ ದೊಡ್ಡಯ್ಯನನ್ನು ಬಂಧಿಸಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಗಂಭೀರ ಅನಾರೋಗ್ಯದ ಕಾರಣದಿಂದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ೨೦೨೫ರ ನ.೧೨ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅದರ ಬೆನ್ನಲ್ಲೇ ಉಳಿದ ಆರೋಪಿಗಳೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

RELATED ARTICLES
- Advertisment -
Google search engine

Most Popular