ನವದೆಹಲಿ : ಬೆಂಗಳೂರು, ಮಂಡ್ಯ, ಮೈಸೂರು ರೈಲು ಮಾರ್ಗದ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತುಕತೆ ನಡೆಸಿದರು.
ಗುರುವಾರ ಮಧ್ಯಾಹ್ನ ಸಂಸತ್ ಭವನದಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ರೈಲ್ವೆ ಸಚಿವರ ಜೊತೆ ಚರ್ಚೆ ನಡೆಸಿದ ಕುಮಾರಸ್ವಾಮಿ ಅವರು ಮುಖ್ಯವಾಗಿ ಬೆಂಗಳೂರು ನಗರದಿಂದ ಮೈಸೂರು ನಡುವೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಾರ್ವಜನಿಕರ ರೈಲ್ವೆ ಬೇಡಿಕೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದರು.
ಬೆಂಗಳೂರು-ಮಂಗಳೂರು-ಮುರುಡೇಶ್ವರ ನಡುವೆ ಸಂಚರಿಸುವ ರೈಲು (ರೈಲು ಸಂಖ್ಯೆ 16585) ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮಂಡ್ಯದಲ್ಲಿ ನಿಲುಗಡೆ ನೀಡುವ ಬಗ್ಗೆ ಸಚಿವರು ಚರ್ಚಿಸಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಸಚಿವರು ತ್ವರಿತವಾಗಿ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಮದ್ದೂರು ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಮನವಿ ಮಾಡಿದ ಸಚಿವರು, ಈ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣಿ ಹೆಚ್ಚಾಗಿರುವುದರಿಂದ ಈ ನಿಲ್ದಾಣವನ್ನು ಆಧುನೀಕರಿಸಿ ಮೇಲ್ದರ್ಜೆಗೆ ಏರಿಸಬೇಕು ಎಂದು ಕೋರಿದರು.
ಈ ಮಾರ್ಗದಲ್ಲಿ ರೈಲುಗಳ ನಿರಂತರ ಸಂಚಾರದಿಂದಾಗಿ, ರೈತರು ಮತ್ತು ಸಾರ್ವಜನಿಕರು ದೀರ್ಘಕಾಲದಿಂದ ಸಂಚಾರ ಅಡಚಣೆ ಎದುರಿಸುತ್ತಿದ್ದಾರೆ. ಅಲ್ಲದೆ, ಸುರಕ್ಷತಾ ಕಾಳಜಿಗಳು ಸೇರಿದಂತೆ ತೀವ್ರ ಅನಾನುಕೂಲತೆ ಎದುರಿಸುತ್ತಿದ್ದಾರೆ. ವಿ.ಸಿ. ಫಾರ್ಮ್ ಗೇಟ್ನಲ್ಲಿ ರೈಲ್ವೆ ಓವರ್ಬ್ರಿಡ್ಜ್ ಇಲ್ಲದಿರುವುದು ದೈನಂದಿನ ಪ್ರಯಾಣ ಮತ್ತು ಕೃಷಿ ಉತ್ಪನ್ನಗಳ ಸಾಗಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ, ಈ ಜಾಗದಲ್ಲಿ ರೈಲ್ವೆ ಓವರ್ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಸಚಿವರು ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರು.
ಮಂಡ್ಯದಿಂದ ತೂಬಿನಕೆರೆ, ಪಾಂಡವಪುರದಿಂದ ಕೆಆರ್ಎಸ್ ಮತ್ತು ಕೆ.ಆರ್. ಪೇಟೆ ಮತ್ತು ಮಡಿಕೇರಿ ಕಡೆಗೆ ಪ್ರಯಾಣಿಸುವ ವಾಹನಗಳು ದೊಡ್ಡಬ್ಯಾಡರಹಳ್ಳಿಯಲ್ಲಿ ತೀವ್ರ ಸಂಚಾರ ದಟ್ಟಣೆಯನ್ನು ಹೊಂದಿರುವುದರಿಂದ ಇಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಅಸ್ತಿತ್ವದಲ್ಲಿರುವ ಲೆವೆಲ್ ಕ್ರಾಸಿಂಗ್ ಪ್ರಮುಖ ಅಡಚಣೆಯಾಗಿದ್ದು, ಪ್ರಯಾಣಿಕರಿಗೆ ಆಗಾಗ್ಗೆ ವಿಳಂಬ ಮತ್ತು ಅನಾನುಕೂಲ ಉಂಟು ಮಾಡುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಪಾಂಡವಪುರ ಪಟ್ಟಣವು ಕೆ.ಆರ್. ಪೇಟೆ, ನಾಗಮಂಗಲ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ವ್ಯಾಪಾರ ಕೇಂದ್ರ ಸ್ಥಾನವಾಗಿದ್ದು, ಕೃಷಿ ಮತ್ತು ವಾಣಿಜ್ಯ ಸರಕುಗಳ ದಕ್ಷ ಸಾಗಣೆಗೆ ಅನುಕೂಲವಾಗುವಂತೆ ರೈತರು ಮತ್ತು ವ್ಯಾಪಾರಿಗಳಿಗೆ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆ ಮಾಡಬೇಕು ಎಂದು ರೈಲ್ವೆ ಸಚಿವರಿಗೆ ವಿನಂತಿಸಿದರು.
ಮದ್ದೂರು ತಾಲೂಕಿನ ಹನಕೆರೆ ಗ್ರಾಮದ ಬಳಿ ಇರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 60) ಅನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವರು ಕೋರಿದರು. ಚನ್ನಪಟ್ಟಣದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಮಾಡುವುದು ಅಗತ್ಯವಾಗಿದೆ ಎಂದು ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಚಾಮುಂಡಿ ಎಕ್ಸ್ಪ್ರೆಸ್ ರೈಲಿನ (ಸಂಖ್ಯೆ 16215) ಬೋಗಿಗಳನ್ನು ಹೆಚ್ಚಿಸಿ ಪ್ರಯಾಣಿಕರ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಕೂಡ ಸಚಿವರು ರೈಲ್ವೆ ಸಚಿವರ ಜೊತೆ ಚರ್ಚಿಸಿದರು. ಮಂಡ್ಯ ಜಿಲ್ಲೆಯ ನೊಡೇಕೊಪ್ಪಲು ಗ್ರಾಮದ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣದ ಬಗ್ಗೆ ಕೂಡ ಮನವಿ ಸಲ್ಲಿಕೆ. ಗ್ರಾಮಸ್ಥರು, ಮುಖ್ಯವಾಗಿ ರೈತರು ಮತ್ತು ಶಾಲಾ ಮಕ್ಕಳಿಗೆ ಈ ಅಂಡರ್ ಪಾಸ್ ನಿರ್ಮಾಣದಿಂದ ಹೆಚ್ಚು ಅನುಕೂಲ ಆಗಲಿದೆ ಎಂಬ ಅಂಶವನ್ನು ಸಚಿವರು ಮನವರಿಕೆ ಮಾಡಿಕೊಟ್ಟರು.
ಮಂಗಳೂರು ಮತ್ತು ಹಾಸನ ಮಾರ್ಗವಾಗಿ ಮುಂಬೈ-ಬೆಂಗಳೂರು-ಮುಂಬೈ ನಗರಗಳಿಗೆ ಸಂಪರ್ಕಿಸಲು ಹೊಸ ರೈಲು ಮಂಜೂರು ಮಾಡಲು ಸಚಿವ ಕುಮಾರಸ್ವಾಮಿ ಅವರು ಮನವಿ ಮಾಡಿದರು. ರಾಮನಗರ ಮತ್ತು ಚನ್ನಪಟ್ಟಣದ ನಡುವೆ ಬರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 44) ರೈಲ್ವೆ ಮೇಲು ಸೇತುವೆ ನಿರ್ಮಾಣ ಮಾಡುವುದು. ಇದರಿಂದಾಗಿ ಆ ಭಾಗದ ಸಾರ್ವಜನಿಕರ ಸುಲಭ ಪ್ರಯಾಣಕ್ಕೆ ಅನುಕೂಲ ಆಗಲಿದೆ ಎಂದು ಸಚಿವರು ವಿನಂತಿ ಮಾಡಿದರು.
ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗಕ್ಕೆ ಮಂಜೂರಾತಿ ನೀಡುವಂತೆ ಸಚಿವ ಕುಮಾರಸ್ವಾಮಿ ಅವರು ಅಶ್ವಿನಿ ವೈಷ್ಣವ್ ಅವರಲ್ಲಿ ಮನವಿ ಮಾಡಿದರು. ಈ ಮಾರ್ಗವು ಹೆಜ್ಜಾಲ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು ಮಾರ್ಗವಾಗಿ ಸಂಚರಿಸುತ್ತದೆ. ಈ ಮಾರ್ಗವು ಬಹಳ ಮುಖ್ಯವಾಗಿದ್ದು, ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತದೆ ಎಂಬ ಅಂಶವನ್ನು ಸಚಿವರು ಮನವರಿಕೆ ಮಾಡಿಕೊಟ್ಟರು.
ಅಲ್ಲದೇ, ಕೊಪ್ಪಳ ಜಿಲ್ಲೆಯಲ್ಲಿ ಹೊಸ ಬ್ರಾಡ್ಗೇಜ್ ರೈಲು ಮಾರ್ಗಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಹಾಸನ ಜಿಲ್ಲೆಯ ಸಕಲೇಶಪುರ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡುವುದು, ಹೊಸಕೋಟೆ ತಾಲೂಕಿನ ತಿಂಡ್ಲು ಗ್ರಾಮದ ಬಳಿಯ ಸರ್ವೀಸ್ ರಸ್ತೆಯಲ್ಲಿ ಮ್ಯಾಜಿಕ್ ಬಾಕ್ಸ್ಗಳನ್ನು ಅಳವಡಿಸುವುದು ಸೇರಿ ಹಲವಾರು ಪ್ರಸ್ತಾವನೆಗಳನ್ನು ಸಚಿವರು ರೈಲ್ವೆ ಸಚಿವರಿಗೆ ಸಲ್ಲಿಸಿದರು.
ಈ ಎಲ್ಲಾ ಬೇಡಿಕೆಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತ್ವರಿತವಾಗಿ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ. ಬುಧವಾರವೂ ರೈಲ್ವೆ ಸಚಿವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.



