ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯನ್ನು ಬ್ಯಾಲೆಟ್ ಪೇಪರ್‌ನಲ್ಲಿ ನಡೆಸಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ಪಾಲಿಕೆಗಳ ಮಾದರಿಯಲ್ಲೇ ಗ್ರಾಮ ಪಂಚಾಯತ್, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಎಲೆಕ್ಟ್ರಾನಿಕ್ ಮತಯಂತ್ರ ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್) ಬಳಕೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ತಿದ್ದುಪಡಿ ಮಸೂದೆ-2026’ಕ್ಕೆ ಸಂಪುಟ ಅನುಮೋದನೆ ನೀಡಿದೆ.
ಈ ಬಗ್ಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಪಂಚಾಯತ್ ಚುನಾವಣೆಯಲ್ಲೂ ಬ್ಯಾಲೆಟ್ ಪೇಪರ್ ಬಳಕೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಬಳಿಕ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಯಿತು.
ಆಡಳಿತಾಧಿಕಾರಿಗಳ ನೇಮಕ :
ಬಹುತೇಕ ಗ್ರಾಮ ಪಂಚಾಯತ್‌ಗಳ ಅಧಿಕಾರಾವಧಿ ಇದೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯಲಿದೆ. ಹೀಗಾಗಿ ಚುನಾವಣೆ ನಡೆಯುವವರೆಗೂ ಸರ್ಕಾರ ಆಡಳಿತಾಧಿಕಾರಿಗಳ ನೇಮಕಕ್ಕೆ ಆದೇಶ ಹೊರಡಿಸಿದೆ. ಮತ್ತೊಂದೆಡೆ 2026ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪೂರ್ವಸಿದ್ಧತೆಗೆ ನಿರ್ದೇಶನ ನೀಡಲಾಗಿದೆ.



