Friday, February 6, 2026
Google search engine

Homeರಾಜಕೀಯಐದು ವರ್ಷವೂ ಸಿದ್ದರಾಮಯ್ಯ ಸಿಎಂ: ಯತೀಂದ್ರ ಪುನರುಚ್ಚಾರ

ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ಯತೀಂದ್ರ ಪುನರುಚ್ಚಾರ

ಮೈಸೂರು : ಐದು ವರ್ಷವೂ ನಮ್ಮ ತಂದೆಯವರೇ ಸಿಎಂ. ಇದು ಈಗ ಸೆಟ್ಲಡ್ ವಿಚಾರ ಎಂದು ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಮೈಸೂರಿನಲ್ಲಿ ವಿಚಾರ ಬಹಿರಂಗಪಡಿಸಿದ ಸಿಎಂ ಪುತ್ರ ಯತೀಂದ್ರ, ಹೈಕಮಾಂಡ್ ಈ ಬಗ್ಗೆ ನಮ್ಮ ತಂದೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಯಾರೋ ಕೆಲವರು ನಾಯಕತ್ವ ಬದಲಾವಣೆ ಬಗ್ಗೆ ಪ್ರಯತ್ನ ಮಾಡಿದ್ದರು. ಆ ಪ್ರಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಅಲ್ಲಿಗೆ ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿ ಅಧಿಕಾರ ನಡೆಸುತ್ತಾರೆ. ಪಕ್ಷದಲ್ಲಿ ಈಗ ಎಲ್ಲೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ಆಗುತ್ತಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಮ್ಮಲ್ಲಿ ಈಗ ಯಾವ ಗೊಂದಲಗಳೂ ಇಲ್ಲ ಎಂದು ತಿಳಿಸಿದರು.

ಮುಡಾ ಪ್ರಕರಣ ನ್ಯಾಯಾಲಯದಿಂದ ಸಿಎಂ ಕುಟುಂಬಕ್ಕೆ ಕ್ಲೀನ್‌ಚಿಟ್ ಸಿಕ್ಕ ಬಗ್ಗೆ ಮಾತನಾಡಿ, ದೂರುದಾರರು ಮೇಲ್ಮನವಿ ಹೋಗುತ್ತೇವೆ ಎಂದು ಹೇಳಿದ್ದಾರೆ. ಆ ಪ್ರಕ್ರಿಯೆ ಮುಗಿಯಲಿ. ಆ ನಂತರ ಸೈಟ್ ವಾಪಸ್ ಪಡೆಯುವ ಬಗ್ಗೆ ನಮ್ಮ ತಾಯಿ ತೀರ್ಮಾನ ಮಾಡುತ್ತಾರೆ. ಈಗ ಸದ್ಯಕ್ಕಂತು ಆ ವಿಚಾರವನ್ನ ನಾವು ಚರ್ಚೆ ಮಾಡಿಲ್ಲ. ಪ್ರಕರಣದಲ್ಲಿ ಇನ್ನೂ ಕಾನೂನು ಪ್ರಕ್ರಿಯೆಗಳು ಬಾಕಿ ಇವೆ. ಮೊದಲು ಅವೆಲ್ಲಾ ಮುಗಿಯಲಿ. ಸದ್ಯಕ್ಕೆ ನಮ್ಮ ತಾಯಿಗೆ ಈ ಪ್ರಕರಣದಿಂದ ಕ್ಲೀನ್‌ಚಿಟ್ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಸಚಿವ ಜಾರ್ಜ್ ರಾಜೀನಾಮೆ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಜಾರ್ಜ್ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಯಾವತ್ತೂ ಜಾರ್ಜ್ ಅವರ ಬಗ್ಗೆ ಅವರ ಇಲಾಖೆಯ ಬಗ್ಗೆ ಯಾವ ಚರ್ಚೆಯೂ ಮಾಡಿಲ್ಲ. ಸುಖಾಸುಮ್ಮನೆ ಬಿಜೆಪಿಯವರು ನನ್ನ ಹೆಸರನ್ನು ಎಳೆದು ತಂದಿದ್ದಾರೆ. ನನ್ನ ತಂದೆಯವರನ್ನು ಟಾರ್ಗೆಟ್ ಮಾಡಲು ಬಿಜೆಪಿಗೆ ಆಗಲ್ಲ. ಈ ಕಾರಣದಿಂದ ಎಲ್ಲಾ ವಿಚಾರದಲ್ಲೂ ನನ್ನನ್ನು ಟಾರ್ಗೆಟ್ ಮಾಡುತ್ತಾರೆ. ಜಾರ್ಜ್ ಅವರ ವಿಚಾರದಲ್ಲೂ ಆಗಿರುವುದು ಅದೆ ಎಂದರು.

ಎಲ್ಲಾ ಚುನಾವಣೆಗಳಲ್ಲೂ ಇವಿಎಂ ರದ್ದಾಗಬೇಕು. ಬ್ಯಾಲೆಟ್ ಪೇಪರ್ ಬಳಕೆ ಮತ್ತೆ ಬರಬೇಕು. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಲಾಗಿದೆ. ಇದೇ ರೀತಿ ಎಲ್ಲಾ ವಿಧಾನಸಭೆ ಚುನಾವಣೆಗಳಲ್ಲೂ ಬ್ಯಾಲೆಟ್ ಪೇಪರ್ ಬಳಕೆಯಾಗಬೇಕು. ಇವಿಎಂ ಮತಯಂತ್ರದಲ್ಲಿ ಸಾಕಷ್ಟು ದೋಷಗಳಿವೆ. ಇವಿಎಂ ಅನ್ನು ಹ್ಯಾಕ್ ಮಾಡಬಹುದು. ದೋಷಪೂರಿತ ವ್ಯವಸ್ಥೆ ಇದ್ದ ಮೇಲೆ ಅದನ್ನ ಯಾಕೆ ಇಟ್ಟುಕೊಳ್ಳಬೇಕು. ಮೊದಲಿನ ರೀತಿ ಈಗ ಬ್ಯಾಲೆಟ್ ಬಾಕ್ಸ್‌ಗಳನ್ನು ಕಳ್ಳತನ ಮಾಡಲು ಆಗಲ್ಲ. ನಮ್ಮ ವ್ಯವಸ್ಥೆ ಬಹಳ ಬಿಗಿ ಇದೆ. ಹೀಗಾಗಿ, ತಾಂತ್ರಿಕ ಕಳ್ಳತನ ಮಾಡಲು ಇವಿಎಂನಲ್ಲಿ ಸಾಧ್ಯವಿದೆ. ಈ ಎಲ್ಲ ಕಾರಣದಿಂದ ಇವಿಎಂ ರದ್ದಾಗಬೇಕು ಎಂದು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular