ಆನ್‌ಲೈನ್ ಹೂಡಿಕೆ ಹೆಸರಲ್ಲಿ ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಉತ್ತರ ಭಾರತ ಮೂಲದ 11 ಮಂದಿಯನ್ನು ಮಂಗಳೂರು ಸೆನ್ ಕೈಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗುಜರಾತ್‌ನ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್‌ನ ಪುಪ್ಲ ಶಿವಕುಮಾರ್ ರಾವ್ (32) ಮತ್ತು ರಾಜೇಶ್ ಮಂಡನ್ (30), ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ಗೌರವ್ ಪಾಂಡೆ (24) ಮತ್ತು ಹರ್ಷ ಮಿಸ್ರಾ (22) ಹಾಗೂ ಮುಹಮ್ಮದ್ ಆಕೀಬ್ ಅಲಿ (27), ನೌಶಾದ್ ಅಲಿ (34), ಬಿಹಾರ್‌ನ ರಾಜೀವ್ ರಂಜನ್ ಕುಮಾರ್ (30), ರಾಜಸ್ತಾನದ ಓಂ ಪ್ರಕಾಶ್ ಯಾದವ್ (37) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 1 ಲ್ಯಾಪ್‌ಟಾಪ್, 21 ಮೊಬೈಲ್ ಪೋನ್‌ಗಳು, ವಿವಿಧ ಕಂಪನಿಯ 20 ಸಿಮ್‌ಕಾರ್ಡ್‌ಗಳು, ಬೇರೆ ಬೇರೆ ಬ್ಯಾಂಕ್‌ಗಳ 20 ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಲಾಗಿದೆ.
ವ್ಯಕ್ತಿಯೊಬ್ಬರಿಂದ 1.38 ಕೋ.ರೂ.ವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ ಬಗ್ಗೆ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು 11 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಭಾರತ ಮೂಲದ ಈ ವಂಚಕರು ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋ.ರೂ. ವಂಚನೆ ಮಾಡುತ್ತಿದ್ದರು. ಈ ತಂಡದಲ್ಲಿ 16 ಮಂದಿ ಭಾರತೀಯರು ಹಾಗೂ ಚೈನಾದ ಹಲವರಿದ್ದಾರೆ. ನೇಪಾಳದ ಪೊಲೀಸರು ಚೈನಾದ ವಂಚಕರನ್ನು ಬಂಧಿಸಿದ್ದಾರೆ. ಭಾರತೀಯ ವಂಚಕರ ಪೈಕಿ ಐವರು ತಲೆಮರೆಸಿ ಕೊಂಡಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದರು.ಆರೋಪಿಗಳ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ 624 ಬ್ಯಾಂಕ್ ಖಾತೆಗಳ ವಿವರಗಳು ಕಂಡು ಬಂದಿದೆ. ಈ ಬ್ಯಾಂಕ್ ಖಾತೆಗಳ ಮೇಲೆ 4,580ಕ್ಕೂ ಅಧಿಕ NCRP PORTALನಲ್ಲಿ ಪ್ರಕರಣಗಳು ದಾಖಲಾಗಿದೆ. ಆ ಪೈಕಿ 1 ಬ್ಯಾಂಕ್ ಖಾತೆಯಲ್ಲಿ 167 ಕೋ.ರೂ. ವರ್ಗಾವಣೆಯಾಗಿದೆ. ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚನೆಗೆ ಬಳಸಿದ 10 ಬ್ಯಾಂಕ್ ಖಾತೆಗಳಿಗೆ ಸುಮಾರು 30,70,26,725 ರೂ. ವರ್ಗಾವಣೆಯಾಗಿದೆ. ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆಗಳನ್ನು ಪಡೆಯಲು ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ವಂಚಕರ ಒಂದು ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್‌ರನ್ನು ನೇಮಕ ಮಾಡಿಕೊಂಡು ವಂಚನೆಯ ಹಣವನ್ನು ವರ್ಗಾವಣೆ ಮಾಡುವುದು ಹಾಗೂ ಹಣವನ್ನು USDTನಲ್ಲಿ ಬದಲಾಯಿಸಿ ನಂತರ ವಿದೇಶಕ್ಕೆ ಕಳುಹಿಸುತ್ತಾರೆ. ವಂಚಕರ ಇನ್ನೊಂದು ತಂಡವು ಕಾಂಬೋಡಿಯಾ ಮತ್ತಿತರ ದೇಶಗಳಲ್ಲಿ ಕುಳಿತು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ವಿದೇಶಗಳಿಗೆ ಕೆಲಸಕ್ಕೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಹಣ ಗಳಿಸುವ ಆಮೀಷ ಒಡ್ಡಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸುತ್ತಿದ್ದಾರೆ. ಈ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವು ನಿಯಂತ್ರಣ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ದೂರುದಾರರಿಗೆ ನೀಡಿದ 10 ಬ್ಯಾಂಕ್ ಖಾತೆಗಳಲ್ಲಿ ದೇಶ್ಯಾದಂತ NCRP PORTAL ನಲ್ಲಿ ಸುಮಾರು 128 ಪ್ರಕರಣಗಳು ಮತ್ತು 36 ಎಫ್‌ಐಆರ್ ದಾಖಲಾಗಿರುತ್ತದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.



