Thursday, February 26, 2026
Google search engine

Homeಸಿನಿಮಾಅಂಜನಾದ್ರಿ ಬೆಟ್ಟದಲ್ಲಿ ʼಜೈ ಹನುಮಾನ್‌ʼ ಸಿನಿಮಾಕ್ಕೆ ಚಾಲನೆ

ಅಂಜನಾದ್ರಿ ಬೆಟ್ಟದಲ್ಲಿ ʼಜೈ ಹನುಮಾನ್‌ʼ ಸಿನಿಮಾಕ್ಕೆ ಚಾಲನೆ

ಪೌರಾಣಿಕ ಭಾವನೆ, ಭಕ್ತಿಯ ತೀವ್ರತೆ ಮತ್ತು ಭವ್ಯತೆಯ ಮಿಶ್ರಣವಾಗಿ ಬರಲಿರುವ ಪ್ಯಾನ್–ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಇದೀಗ ಭರ್ಜರಿ ಆರಂಭ ಪಡೆದಿದ್ದು, ದೇಶಾದ್ಯಂತ ಕುತೂಹಲ ಹುಟ್ಟಿಸಿರುವ ಈ ಮಹಾಕಾಯ ಯೋಜನೆ, ಭಕ್ತಿ–ಆಕ್ಷನ್‌ ಮಿಶ್ರಣದ ಅದ್ಭುತ ದೃಶ್ಯ ವೈಭವವಾಗಿ ರೂಪುಗೊಳ್ಳಲಿದೆ ಎಂಬ ವಿಶ್ವಾಸ ಸಿನಿಪ್ರೇಕ್ಷಕರಲ್ಲಿ ಮೂಡಿದೆ.

ಇನ್ನೂ ಈ ಚಿತ್ರಕ್ಕೆ ಪವಿತ್ರ ತಾಣವಾದ ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿ ಚಾಲನೆ ನೀಡಲಾಗಿದ್ದು, ಹನುಮಂತನ ಜನ್ಮಸ್ಥಳವೆಂದೇ ಪ್ರಸಿದ್ಧಿ ಪಡೆದಿರುವ ಈ ಪುಣ್ಯಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಿತ್ರತಂಡ ಸಿನಿಮಾ ಪ್ರಯಾಣಕ್ಕೆ ನಾಂದಿ ಹಾಡಿದ್ದಾರೆ.

ನಾಯಕ ರಿಷಬ್ ಶೆಟ್ಟಿ ಮತ್ತು ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ವರ್ಮ ದೈವಿಕ ಆಶೀರ್ವಾದ ಕೋರಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಚಿತ್ರತಂಡದ ತಾಂತ್ರಿಕ ವರ್ಗ ಹಾಗೂ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದು, ಆಧ್ಯಾತ್ಮಿಕತೆಯೊಂದಿಗೆ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಚಿತ್ರದ ಮೊದಲ ದೃಶ್ಯಕ್ಕೆ ಖ್ಯಾತ ನಿರ್ಮಾಪಕ ಭೂಷಣ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಹೆಸರಾಂತ ವಿತರಕ ಅನಿಲ್ ತಡಾನಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ವಿಶೇಷವಾಗಿ ‘ಹನುಮಾನ್’ ಚಿತ್ರದ ಯಶಸ್ಸಿನ ನಂತರ ಹೆಚ್ಚು ಗಮನ ಸೆಳೆದ ನಟ ತೇಜ ಸಜ್ಜ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿ ತಂಡಕ್ಕೆ ಶುಭ ಕೋರಿದರು.

ಕಾರ್ಯಕ್ರಮದ ಪ್ರಮುಖ ಘಟ್ಟವಾಗಿ ನಿರ್ಮಾಪಕರಾದ ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ, ಅನಿಲ್ ತಡಾನಿ ಹಾಗೂ ಭೂಷಣ್ ಕುಮಾರ್ ಚಿತ್ರದ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಪ್ರಶಾಂತ್ ವರ್ಮ ಅವರಿಗೆ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಕೆಲಸಗಳಿಗೆ ಚಾಲನೆ ನೀಡಿದರು. ಈ ಪ್ಯಾನ್–ಇಂಡಿಯಾ ಚಿತ್ರದಲ್ಲಿ ರಿಷಬ್ ಶೆಟ್ಟಿ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆ ಮಾಡಲಿದ್ದಾರೆ ಹಾಗೂ ಖ್ಯಾತ ಛಾಯಾಗ್ರಾಹಕ ಎಸ್.ತಿರುನಾವಕ್ಕರಸು ಕ್ಯಾಮೆರಾ ಕೈಚಳಕ ಇರಲಿದೆ ಎನ್ನಲಾಗಿದೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರ ‘ಪ್ರಶಾಂತ್ ವರ್ಮ ಸಿನಿಮಾಟಿಕ್ ಯುನಿವರ್ಸ್’ ಅಡಿಯಲ್ಲಿ ಭಾರೀ ವೆಚ್ಚದಲ್ಲಿ ಮೂಡಿಬರಲಿದೆ. ಈಗಾಗಲೇ ‘ಹನುಮಾನ್’ ಚಿತ್ರದ ಯಶಸ್ಸಿನ ಬಳಿಕ ಈ ಯುನಿವರ್ಸ್ ಮೇಲೆ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರಿದೆ. ಅಲ್ಲದೆ ಭಕ್ತಿ, ಸಾಹಸ ಮತ್ತು ಭವ್ಯತೆಯ ಸಂಯೋಜನೆಯೊಂದಿಗೆ ಬರಲಿರುವ ‘ಜೈ ಹನುಮಾನ್’ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರನ್ನು ಹನುಮಂತನ ರೂಪದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

RELATED ARTICLES
- Advertisment -
Google search engine

Most Popular