ಕೇರಳದಿಂದ ಅಕ್ರಮವಾಗಿ ಕೆಂಪುಕಲ್ಲುಗಳನ್ನು ಸಾಗಿಸುತ್ತಿದ್ದ 2 ಲಾರಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೆರುವಾಯಿ ಗ್ರಾಮದ ಬೆರಿಪದವು ಎಂಬಲ್ಲಿ ನಡೆದಿದೆ.
ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ(ಕಾ&ಸು) ರಾಮಕೃಷ್ಣ ರವರಿಗೆ ಕೇರಳ ಕಡೆಯಿಂದ ಪೆರುವಾಯಿ ಮಾರ್ಗವಾಗಿ ಲಾರಿಗಳಲ್ಲಿ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಕರ್ನಾಟಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ಬಂಟ್ವಾಳ ಪೆರುವಾಯಿ ಗ್ರಾಮದ ಬೆರಿಪದವು ಎಂಬಲ್ಲಿ ಕೆಂಪುಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿದ್ದ KA-21-C-0562 ಹಾಗೂ KA-12-A-2252 ನೇ ನೋಂದಣಿಯ 2 ಲಾರಿಗಳನ್ನು ತಡೆದು, KA-21-C-0562 ನೇಯದರ ಲಾರಿ ಚಾಲಕನನ್ನು ವಿಚಾರಿಸಲಾಯಿತು. ವಿಟ್ಲ ನಿವಾಸಿ ಸಾದಿಕ್ (25) ಎಂಬುದಾಗಿ ಹಾಗೂ KA-12-A-2252 ಲಾರಿಯ ಚಾಲಕ ವಿಟ್ಲ ನಿವಾಸಿ ಮೊಹಮ್ಮದ್ (46) ಎಂಬುದಾಗಿ ತಿಳಿಸಿರುತ್ತಾರೆ. ಈ ಕೆಂಪು ಕಲ್ಲುಗಳನ್ನು ಕೇರಳದ ಧರ್ಮತ್ತಡ್ಕದಿಂದ ವೇಣು ಎಂಬವರು ತುಂಬಿಸಿ ಕಳುಹಿಸಿಕೊಟ್ಟಿರುವುದಾಗಿ ಹಾಗೂ ಈ ಬಗ್ಗೆ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳು ಇರುವುದಿಲ್ಲ ಎಂಬುದಾಗಿ ಪರಿಶೀಲನೆಯ ವೇಳೆ ತಿಳಿದುಬಂದಿದೆ. ಮುಂದಿನ ಕಾನೂನುಕ್ರಮಕ್ಕಾಗಿ ಲಾರಿಗಳ ಚಾಲಕರನ್ನು ವಶಕ್ಕೆ ಪಡೆದು, ಲೋಡ್ ಸಹಿತವಾಗಿ ಲಾರಿಗಳನ್ನು ಸ್ವಾಧೀನಪಡಿಸಿ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 49/2026, ಕಲಂ: 303(2) BNS 2023, ಕಲಂ. 4(1), 21 MMDR (MINES AND MINERALS REGULATION OF DEVELOPMENT) ACT 1957, ಕಲಂ: 3, 44 KARNATAKA MINOR MINERAL CONSISTENT RULE 1994 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



