ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಈ ವೇಳೆ ಯಾವುದೇ ರೀತಿಯ ಅಕ್ರಮ ನಡೆಯದಂತೆ ಪರೀಕ್ಷಾ ಬೋರ್ಡ್ ಹದ್ದಿನ ಕಣ್ಣಿಟ್ಟಿದೆ.
ನಾಳೆಯಿಂದ ಮಾ.17ರವರೆಗೆ ಪರೀಕ್ಷೆ ನಡೆಯಲಿದ್ದು, 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ 1,217 ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಪರೀಕ್ಷೆ ನಡೆಯಲಿದೆ. ಹೀಗಾಗಿ ಎಕ್ಸಾಂ ಸೆಂಟರ್ಗಳಲ್ಲಿ ಕಟ್ಟೆಚ್ಚರ, ಸೋಶಿಯಲ್ ಮೀಡಿಯಾದ ಮೇಲೂ ಬೋರ್ಡ್ ಕಣ್ಣಿಟ್ಟಿದೆ. ಜೊತೆಗೆ ಪೇಪರ್ ಲೀಕ್ ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದ್ದು, ಪ್ರಶ್ನೆಪತ್ರಿಕೆ ರವಾನೆಗೂ ಬಿಗಿ ಭದ್ರತೆ ವಹಿಸಲಾಗಿದೆ.
ಏನೆಲ್ಲಾ ಕ್ರಮ?
- ಪರೀಕ್ಷೆ ನಡೆಯೋ ದಿನದಿಂದ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿ.
- ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಕಂಪ್ಯೂಟರ್ ಶಾಪ್ ಕ್ಲೋಸ್ಗೆ ಕ್ರಮ.
- ಹಿಂದಿನ ಪರೀಕ್ಷೆಗಳಲ್ಲಿ ಅಕ್ರಮದಲ್ಲಿ ಭಾಗಿಯಾಗಿರೋ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆಯಿಂದ ವಿಶೇಷ ನಿಗಾ.
- ಪರೀಕ್ಷೆ ನಡೆಯೋ ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ.
- ಸುಳ್ಳು ಸುದ್ದಿ ಹರಡಿಸೋ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ನೇತೃತ್ವದಲ್ಲಿ ವಿಶೇಷ ತಂಡದ ರಚನೆ.
- ಇಡೀ ಪರೀಕ್ಷಾ ವ್ಯವಸ್ಥೆ ಮಾನಿಟರ್ ಮಾಡಲು ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ, ಪ್ರತಿ ಜಿಲ್ಲೆ ಡಿಸಿಗಳು, ಎಸ್ಪಿಗಳು ಮಾನಿಟರ್ ಮಾಡಲು ವ್ಯವಸ್ಥೆ.
- ಪ್ರಶ್ನೆಪತ್ರಿಕೆ ಖಜಾನೆಯಿಂದ ಕೇಂದ್ರಗಳಿಗೆ ಹೋಗೋವಾಗ ಬಿಗಿ ಪೊಲೀಸ್ ಭದ್ರತೆ, ಪ್ರಶ್ನೆಪತ್ರಿಕೆ ರವಾನೆ ವಿಡಿಯೋ ಚಿತ್ರೀಕರಣದ ವ್ಯವಸ್ಥೆ.
- ನಿಗದಿ ಮಾಡಿದ ಸಮಯಕ್ಕಿಂತ ಮೊದಲು ಪ್ರಶ್ನೆಪತ್ರಿಕೆ ಖಜಾನೆಯಿಂದ ಓಪನ್ ಮಾಡುವಂತೆ ಇಲ್ಲ. ಅಂತಹ ಘಟನೆ ಕಂಡುಬಂದ್ರೆ ಜವಾಬ್ದಾರಿ ಕೊಟ್ಟಿರುವವರ ಮೇಲೆ ಕಾನೂನು ಕ್ರಮ.
- ಪ್ರಶ್ನೆಪತ್ರಿಕೆ ಜವಾಬ್ದಾರಿವಹಿಸಿರುವವರು ಅಕ್ರಮದಲ್ಲಿ ಭಾಗಿಯಾದ್ರೆ ಕಾನೂನು ಕ್ರಮದ ಎಚ್ಚರಿಕೆ.
- ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಸಂಪೂರ್ಣ ಫೋನ್ ನಿಷೇಧ.
- ಪರೀಕ್ಷಾ ಕೇಂದ್ರಗಳಿಗೆ ವಾಚ್ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳು ನಿಷೇಧ.
- ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಭದ್ರತೆ, ಜಿಲ್ಲೆಗಳಲ್ಲಿ ಎಸ್ಪಿ, ಡಿಸಿಗಳ ನೇತೃತ್ವದಲ್ಲಿ ಭರವಸೆ.
- ಪ್ರತಿ ಕೇಂದ್ರದಲ್ಲಿ ಸಿಟ್ಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್ ನಿಯೋಜನೆ., ಪ್ರತಿ ಕೇಂದ್ರದಲ್ಲಿ ಪೊಲೀಸರ ವ್ಯವಸ್ಥೆ.
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ
- ಫೆಬ್ರವರಿ 28- ಕನ್ನಡ, ಅರೇಬಿಕ್
- ಮಾರ್ಚ್ 2- ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ.
- ಮಾರ್ಚ್ 3- ಇಂಗ್ಲೀಷ್
- ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.
- ಮಾರ್ಚ್ 5- ಇತಿಹಾಸ
- ಮಾರ್ಚ್ 6- ಭೌತಶಾಸ್ತ್ರ
- ಮಾರ್ಚ್ 7- ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ.
- ಮಾರ್ಚ್ 9- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
- ಮಾರ್ಚ್ 10- ಅರ್ಥಶಾಸ್ತ್ರ
- ಮಾರ್ಚ್ 11- ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
- ಮಾರ್ಚ್ 12- ಹಿಂದಿ
- ಮಾರ್ಚ್ 13- ರಾಜ್ಯಶಾಸ್ತ್ರ
- ಮಾರ್ಚ್ 14- ಲೆಕ್ಕಶಾಸ್ತ್ರ, ಗಣಿತ
- ಮಾರ್ಚ್ 16-ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ.
- ಮಾರ್ಚ್ 17- ಹಿಂದುಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ



