ಬೆಂಗಳೂರು : ಭ್ರಷ್ಟಾಚಾರ ಆರೋಪದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಕಡೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರುದಲ್ಲಿ ಕೆಆರ್‌ಐಡಿಎಲ್‌ನ ಮುಖ್ಯ ಎಂಜಿನಿಯರ್ ವಸಂತ್ ವಿ.ನಾಯಕ್, ಬಿಡಿಎ ವ್ಯಾಪ್ತಿಯ ಆರ್‌ಎಫ್‌ಓ ಡಾಲೇಶ್ ಹಾಗೂ ರೈತ ಸೇವಾ ಸಹಕಾರ ಸಂಘದ ಸಿಇಒ ಶಶಿಧರ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದಲ್ಲದೆ ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಿರೇಮಠ, ಮಂಡ್ಯದ ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಎಎಇ ಎಸ್. ಸತೀಶ್, ಧಾರವಾಡದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕೆ.ಸುರಕೋಡ ಅವರ ಮನೆಗಳ ಮೇಲೂ ಪರಿಶೀಲನೆ ನಡೆಸಿದ್ದಾರೆ.
ಹಾಗೆಯೇ ಹಾಸನ ಮಹಾನಗರ ಪಾಲಿಕೆಯ ಎಎಇ ಎಂ.ಸಿ.ಸತ್ಯನಾರಾಯಣ, ಮೈಸೂರಿನ ಜಲಭವನದಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಎಇ ಹಾಗೂ ಇಇ ಆಸಿಫ್ ಇಕ್ಬಾಲ್ ಮತ್ತು ವಿಜಯಪುರದ ಕೃಷ್ಣಾ ಭಾಗ್ಯ ಜಲ ನಿಗಮದ ಕಿರಿಯ ಇಂಜಿನಿಯರ್ ಪ್ರಕಾಶ್ ಪಿ.ಜಿ ಅವರ ಮನೆಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.



