Thursday, March 5, 2026
Google search engine

Homeರಾಜಕೀಯರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗಾಗಿ ಒತ್ತು : ಹೆಚ್‌.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗಾಗಿ ಒತ್ತು : ಹೆಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗಾಗಿ ಸಂಶೋಧನೆ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದಾಗಿ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ನಗರದ ಎಚ್‌ಎಂಟಿ ಭವನದಲ್ಲಿನ ತಮ್ಮ ಕಚೇರಿಯಲ್ಲಿ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ (ಎಫ್‌ಕೆಸಿಸಿಐ) ಪದಾಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಮಟ್ಟದ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ ಪರೀಕ್ಷಾ ಕೇಂದ್ರ ಸ್ಥಾಪಿಸಲು ನಿರ್ಧರಿಸಿದ್ದು, ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗೆ ಸ್ವತಃ ನಾನೇ ಪತ್ರ ಬರೆದಿದ್ದೇನೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ ಎಂದಿದ್ದಾರೆ.

ಇನ್ನೂ ಕೇಂದ್ರ ಸರ್ಕಾರಿ ಸ್ವಾಮ್ಯದ ಈ ತರಬೇತಿ ಕೇಂದ್ರಕ್ಕೆ ಕಳೆದ ಬಜೆಟ್ ನಲ್ಲಿ 500 ಕೋಟಿ ರೂ. ಮೀಸಲಿಡಲಾಗಿದೆ. ಅಗತ್ಯಬಿದ್ದರೆ ಇನ್ನೂ 500 ಕೋಟಿ ರೂ. ಹೂಡಿಕೆಗೆ ಕೇಂದ್ರ ತಯಾರಿದೆ ಎಂದು ಸಚಿವರು ಹೇಳಿದರು.

ಕಂಪನಿಗಳು ಕರ್ನಾಟಕದಲ್ಲಿ ಹುಟ್ಟಿಕೊಳ್ಳುತ್ತಿವೆ, ಆದರೆ ಬೇರೆ ರಾಜ್ಯಗಳಲ್ಲಿ ಉತ್ಪಾದನೆ ಮಾಡುತ್ತಿವೆ. ಇಂತಹ ಪರಿಸ್ಥಿತಿಯಿಂದ ಕರ್ನಾಟಕವನ್ನು ಹೊರತರಬೇಕಿದೆ. ಅದಕ್ಕೆ ಎಆರ್‌ಎಐ ಕೇಂದ್ರ ದೊಡ್ಡ ಮಟ್ಟದ ಕೊಡುಗೆ ನೀಡುತ್ತದೆ. ಆಟೋಮೊಬೈಲ್ ಪರೀಕ್ಷಾ ಕೇಂದ್ರ ಬರುವುದರ ಜತೆಗೆ ಆ ಮೂಲಕ ಸಂಶೋಧನೆ, ಉತ್ಪಾದನೆಗೂ ಮುಂದಿನ ದಿನಗಳಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ತಿಳಿಸಿದರು.

ಮುಂದುವರೆದು, ಸ್ಥಳೀಯ ಮಟ್ಟದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಆಗಬೇಕು ಎಂಬುದು ಪ್ರಧಾನಿಗಳ ದೂರದೃಷ್ಟಿ. ಆ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡುತ್ತಿದ್ದೇವೆ. ರಾಜ್ಯದಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಯಿಂದ ಸಾವಿರಾರು ಸಂಖ್ಯೆಯಷ್ಟು ಉದ್ಯೋಗ ಸೃಷ್ಟಿಯಾಗುತ್ತವೆ. ಪರೋಕ್ಷ ಉದ್ಯೋಗಗಳನ್ನು ಬೃಹತ್ ಪ್ರಮಾಣದಲ್ಲಿ ಸೃಷ್ಟಿಸಿ ದೊಡ್ಡ ಮಟ್ಟದ ಆಟೋ ಇಕೋ ಸಿಸ್ಟಮ್ ನಿರ್ಮಾಣಕ್ಕೆ ನಾಂದಿ ಹಾಡುತ್ತದೆ. ಹೀಗಾಗಿ ಈ ಯೋಜನೆಗೆ ರಾಜ್ಯ ಸರ್ಕಾರದ ಸಹಕಾರವನ್ನು ಕೋರಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಂ ಪ್ರಸಾದ್, ಉಪಾಧ್ಯಕ್ಷ ಬಿ.ಪಿ.ಶಶಿಧರ್, ಗ್ರೀನ್ ಎನರ್ಜಿ ಸಮಿತಿ ಅಧ್ಯಕ್ಷ ರಮೇಶ್ ಶಿವಣ್ಣ, ಮಾಜಿ ಅಧ್ಯಕ್ಷ ಎಸ್.ಸಂಪತ್ ರಾಮನ್ ಸೇರಿದಂತೆ ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular