ಬೆಂಗಳೂರು : ಮಹಿಳಾ ಮೀಸಲಾತಿ ವಿಧೇಯಕವನ್ನು ವಿರೋಧಿಸಿದ್ದ ವಿರೋಧ ಪಕ್ಷಗಳಿಗೆ ಮಹಿಳಾ ಮತದಾರರು ತಕ್ಕ ಪಾಠ ಕಲಿಸಿದ್ದಾರೆಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದು, ಈ ಕುರಿತು ಬೆಂಗಳೂರುದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ (ಟಿಎಂಸಿ), ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಹಾಗೂ ಎಡಪಂಥೀಯ ಪಕ್ಷಗಳು ಮಹಿಳಾ ಸಬಲೀಕರಣವನ್ನು ಕಡೆಗಣಿಸಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆ ಇದೀಗ ತಕ್ಕ ಉತ್ತರ ಸಿಕ್ಕಿದೆ ಎಂದು ಹೇಳಿದರು.
ಇನ್ನೂ ಪ್ರಧಾನಮಂತ್ರಿ ಮೋದಿ ನೇತೃತ್ವದಲ್ಲಿ ಈ ವಿಧೇಯಕಕ್ಕೆ ಉತ್ತೇಜನ ದೊರೆತಿದ್ದು, ಅದಕ್ಕೆ ವಿರೋಧಿಸಿದ ಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧನೆ ಹೆಚ್ಚಾಗಿರುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತದ ವಿರುದ್ಧ ಜನರ ಅಸಮಾಧಾನವನ್ನು ತೋರಿಸುತ್ತದೆ ಎಂದರಲ್ಲದೆ, ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ಸರ್ಕಾರದ ಕುಟುಂಬ ರಾಜಕೀಯವನ್ನು ಟೀಕಿಸಿದ ಅವರು, ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಕರ್ನಾಟಕದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಹಣ ಮತ್ತು ಪ್ರಭಾವ ಬಳಸಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಯಕತ್ವ ಕುರಿತಂತೆಯೂ ಟೀಕೆ ಮಾಡಿದರು.
ಬಳಿಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸೋಮಣ್ಣ ಅವರು, ಸೋಲಿನ ನಂತರ ಮಾತ್ರ ಇವಿಎಂ ಬಗ್ಗೆ ಪ್ರಶ್ನಿಸುವುದು ರಾಜಕೀಯ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳ ಹಾಗೂ ಕೇರಳದಂತಹ ರಾಜ್ಯಗಳಲ್ಲಿ ಬಿಜೆಪಿ ಸಾಧನೆ ರಾಷ್ಟ್ರೀಯ ರಾಜಕೀಯದ ದಿಕ್ಕನ್ನೇ ಬದಲಾಯಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಕರ್ನಾಟಕದಲ್ಲಿ ಪಕ್ಷದ ದೌರ್ಬಲ್ಯಗಳನ್ನು ಸರಿಪಡಿಸುವುದಾಗಿ ಹೇಳಿದರು.



