ಹೈದರಾಬಾದ್ : ತೆಲಂಗಾಣ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವ ಭ್ರಷ್ಟಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಹೈದರಾಬಾದ್ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಂಕೇತ್ ಭೀಮ್ ರೆಡ್ಡಿ ಅವರ ನಿವಾಸ, ಕಚೇರಿ ಸೇರಿದಂತೆ ವಿವಿಧ ಸ್ಥಳಗಳ ಮೇಲೆ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಲ್ಲಿ ₹200 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ತೆಲಂಗಾಣ ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 16 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆದ ಶೋಧ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿ, ನಗದು ಹಾಗೂ ಹೂಡಿಕೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಸಂಕೇತ್ ಭೀಮ್ ರೆಡ್ಡಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಅಪಾರ ಪ್ರಮಾಣದ ಸಂಪತ್ತು ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದ್ದು, ಎಸಿಬಿ ದಾಳಿಯಲ್ಲಿ 50 ಎಕರೆಗೂ ಅಧಿಕ ಕೃಷಿ ಹಾಗೂ ಕೃಷಿಯೇತರ ಭೂಮಿ, ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿರುವ ಐಷಾರಾಮಿ ವಿಲ್ಲಾಗಳು, ವಾಣಿಜ್ಯ ಕಟ್ಟಡಗಳು, ಅಪಾರ ಪ್ರಮಾಣದ ನಗದು, ಕೆಜಿಗಟ್ಟಲೆ ಚಿನ್ನಾಭರಣಗಳು ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಅಲ್ಲದೆ, ವಿವಿಧ ಖಾಸಗಿ ಕಂಪನಿಗಳು ಮತ್ತು ಷೇರು ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ದಾಖಲೆಗಳೂ ಅಧಿಕಾರಿಗಳ ಕೈಗೆ ಸಿಕ್ಕಿವೆ.
ಅಧಿಕಾರಿಯ ಅಧಿಕೃತ ಆದಾಯ ಮತ್ತು ಅವರ ಹೆಸರಿನಲ್ಲಿರುವ ಆಸ್ತಿಯ ನಡುವೆ ಯಾವುದೇ ಹೊಂದಾಣಿಕೆ ಕಂಡುಬಂದಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಳ್ಳಲಾದ ಆಸ್ತಿ ಹಾಗೂ ಹಣಕಾಸು ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಎಸಿಬಿ ಮೂಲಗಳ ಪ್ರಕಾರ, ಕೇವಲ ಬಂಧನಕ್ಕೆ ಮಾತ್ರ ಸೀಮಿತವಾಗದೇ ಅಕ್ರಮವಾಗಿ ಗಳಿಸಿರುವ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನೂ ಚುರುಕುಗೊಳಿಸಲಾಗಿದೆ. ತನಿಖೆ ಇನ್ನಷ್ಟು ವಿಸ್ತಾರಗೊಳ್ಳಲಿದ್ದು, ಈ ಪ್ರಕರಣದಲ್ಲಿ ಇತರ ಪ್ರಭಾವಿ ವ್ಯಕ್ತಿಗಳ ಪಾತ್ರವೂ ಬೆಳಕಿಗೆ ಬರುವ ಸಾಧ್ಯತೆ ಇದೆ.
ಇನ್ನೂ ಈ ಬೆಳವಣಿಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಧಿಕೃತ ವೇತನದ ಮಿತಿಯಲ್ಲಿರುವ ಅಧಿಕಾರಿಯೊಬ್ಬರು ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೇಗೆ ಸಂಪಾದಿಸಿದರು? ಈ ಅಕ್ರಮ ಸಾಮ್ರಾಜ್ಯದ ಹಿಂದೆ ಇನ್ನಾರಾದರೂ ಪ್ರಭಾವಿಗಳ ಕೈವಾಡ ಇದೆಯೇ? ಇಲಾಖೆಯ ಆಂತರಿಕ ಮೇಲ್ವಿಚಾರಣಾ ವ್ಯವಸ್ಥೆ ಈವರೆಗೆ ಏಕೆ ವಿಫಲವಾಯಿತು ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.
ಈ ದಾಳಿಯು ತೆಲಂಗಾಣ ಎಸಿಬಿಯ ಕಾರ್ಯಕ್ಷಮತೆಯನ್ನು ತೋರಿಸಿದರೆ, ಮತ್ತೊಂದೆಡೆ ಪೊಲೀಸ್ ಇಲಾಖೆಯಂತಹ ಸೂಕ್ಷ್ಮ ವ್ಯವಸ್ಥೆಯಲ್ಲಿಯೂ ಭ್ರಷ್ಟಾಚಾರದ ಬೇರುಗಳು ಎಷ್ಟರ ಮಟ್ಟಿಗೆ ಆಳವಾಗಿ ಹರಡಿವೆ ಎಂಬುದನ್ನು ಬಹಿರಂಗಪಡಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣದ ತನಿಖೆ ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.



