ಬೆಂಗಳೂರು : ಬ್ರೂಕ್‌ಫೀಲ್ಡ್‌ನಲ್ಲಿರುವ ಡೇ ಕೇರ್ ಕೇಂದ್ರದಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಎಎಲ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮಂಜುಳಾ ಹಾಗೂ ವಿಜಯಲಕ್ಷ್ಮೀ ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರನ್ನೂ ನ್ಯಾಯಾಧೀಶರ ಎದುರು ಹಾಜರುಪಡಿಸಿದ ಬಳಿಕ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಭವಾನಿ, ಸಿಂಧು ಹಾಗೂ ಬಿಂದು ಅವರ ಪಾತ್ರದ ಬಗ್ಗೆ ಮೇಲ್ನೋಟದ ತನಿಖೆಯಲ್ಲಿ ಸ್ಪಷ್ಟ ಸಾಕ್ಷ್ಯ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮೂವರಿಗೂ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಬ್ರೂಕ್‌ಫೀಲ್ಡ್‌ನ ಡೇ ಕೇರ್ ಕೇಂದ್ರದಲ್ಲಿ ಪುಟ್ಟ ಮಕ್ಕಳಿಗೆ ಆಯಾಗಳು ದೈಹಿಕವಾಗಿ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿರುವ ದೃಶ್ಯಗಳು ವೈರಲ್ ಆಗಿದ್ದವು. ಈ ವಿಡಿಯೊವನ್ನು ಪರಿಶೀಲಿಸಿದ ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಮಕ್ಕಳ ಮೇಲಿನ ಕ್ರೌರ್ಯದ ಕುರಿತು ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮಂಜುಳಾ, ವಿಜಯಲಕ್ಷ್ಮೀ, ಭವಾನಿ, ಸಿಂಧು ಹಾಗೂ ಬಿಂದು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ತನಿಖೆಯ ವೇಳೆ ಇಬ್ಬರ ವಿರುದ್ಧ ಪ್ರಾಥಮಿಕ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ವಿಡಿಯೊ ದೃಶ್ಯಗಳು ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.



