ಮೈಸೂರು: ಮಳೆಗಾಲ ಆರಂಭವಾಗಿದ್ದರೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಮರ್ಪಕ ಮಳೆಯಾಗದ ಕಾರಣ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 81 ಅಡಿಗೆ ಇಳಿದಿದೆ. 124 ಅಡಿ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ ಕೇವಲ 11 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದರಲ್ಲಿ 4 ರಿಂದ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಕೇವಲ 7 ಟಿಎಂಸಿ ನೀರು ಮಾತ್ರ ಲಭ್ಯವಿದೆ.
ಜೂನ್ ತಿಂಗಳ ಅರ್ಧ ಭಾಗ ಕಳೆದರೂ ನಿರೀಕ್ಷಿತ ಮಳೆಯಾಗದಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದರ ನಡುವೆಯೇ ಸುಪ್ರೀಂ ಕೋರ್ಟ್ ಆದೇಶದಂತೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ ನಿಗದಿತ ಪ್ರಮಾಣದ ಕಾವೇರಿ ನೀರನ್ನು ಬಿಡುಗಡೆ ಮಾಡಬೇಕಿರುವುದು ಮತ್ತಷ್ಟು ಒತ್ತಡ ಹೆಚ್ಚಿಸಿದೆ.



