Wednesday, July 15, 2026
Google search engine

Homeಸ್ಥಳೀಯಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಇತಿಹಾಸ ತಜ್ಞರ ವಿರೋಧ : 'ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಳ್ಳಿ'

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಇತಿಹಾಸ ತಜ್ಞರ ವಿರೋಧ : ‘ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಳ್ಳಿ’

ಮೈಸೂರು : 2026ರ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಕುರಿತಾದ ಚರ್ಚೆಗಳು ರಾಜ್ಯಾದ್ಯಂತ ಪರ-ವಿರೋಧದ ಅಲೆಗಳನ್ನು ಎಬ್ಬಿಸುತ್ತಿರುವ ಬೆನ್ನಲ್ಲೇ, ಖ್ಯಾತ ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಅವರು ಈ ಪ್ರಸ್ತಾವನೆಯನ್ನು ಬಲವಾಗಿ ವಿರೋಧಿಸಿದ್ದಾರೆ. ಕಂಬಳವು ಕರಾವಳಿಯ ವಿಶಿಷ್ಟ ಸಂಸ್ಕೃತಿಯಾಗಿದ್ದು, ಅದನ್ನು ಮೈಸೂರಿನ ದಸರಾ ಪರಂಪರೆಯೊಂದಿಗೆ ಬೆರೆಸುವುದು ಸೂಕ್ತವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಸರೆಯ ವೈಶಿಷ್ಟ್ಯಕ್ಕೆ ಧಕ್ಕೆಯಾಗದಿರಲಿ

ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಅಯ್ಯಂಗಾರ್, “ಪ್ರತಿಯೊಂದು ಪ್ರದೇಶವೂ ತನ್ನದೇ ಆದ ಅನನ್ಯ ಸಾಂಸ್ಕೃತಿಕ ಗುರುತನ್ನು ಹೊಂದಿರುತ್ತದೆ. ಬಂಗಾಳದ ದುರ್ಗಾಪೂಜೆ, ತಮಿಳುನಾಡಿನ ಜಲ್ಲಿಕಟ್ಟು ಅಥವಾ ದೆಹಲಿಯ ರಾಮಲೀಲಾ ಆಯಾ ಪ್ರದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಅದೇ ರೀತಿ, 1610ರಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಿಂದ ಆರಂಭಗೊಂಡು ಇಂದಿನವರೆಗೆ ಬೆಳೆದು ಬಂದಿರುವ ಮೈಸೂರು ದಸರಾವು ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಇದನ್ನು ಮೈಸೂರಿನ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿ ಉಳಿಸಿಕೊಳ್ಳಬೇಕು” ಎಂದು ಪ್ರತಿಪಾದಿಸಿದರು.

ಕಂಬಳ ಆಯೋಜನೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಕಂಬಳದ ಕ್ರೀಡೆಗಾಗಿ 20-30 ಎಕರೆ ಭೂಮಿಯನ್ನು ಸಿದ್ಧಪಡಿಸುವುದು, ಬಯಲು ಸೀಮೆಯನ್ನು ಗದ್ದೆಯನ್ನಾಗಿ ಪರಿವರ್ತಿಸುವುದು ಮತ್ತು ಅರಣ್ಯನಾಶದಂತಹ ಪರಿಸರ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಕೇವಲ ಎರಡು ದಿನಗಳ ಕ್ರೀಡೆಗಾಗಿ ಅತಿಯಾದ ಸಾರ್ವಜನಿಕ ಹಣ ಮತ್ತು ಸಂಪನ್ಮೂಲಗಳನ್ನು ವ್ಯಯಿಸುವುದು ಸರಿಯಾದ ಕ್ರಮವಲ್ಲ ಎಂದು ಅವರು ಟೀಕಿಸಿದ್ದಾರೆ.

ಮೂಲ ಪ್ರದೇಶವೇ ಸೂಕ್ತ

“ಕಂಬಳದಂತಹ ಕ್ರೀಡೆಗಳನ್ನು ಜಾಗತಿಕವಾಗಿ ಪ್ರಚಾರ ಮಾಡುವುದರಲ್ಲಿ ತಪ್ಪಿಲ್ಲ, ಆದರೆ ಅದಕ್ಕಾಗಿ ಕರಾವಳಿ ಪ್ರದೇಶವನ್ನೇ ಬಳಸಿಕೊಳ್ಳಬೇಕು. ಪ್ರತಿಯೊಂದು ಆಚರಣೆಯೂ ಅದು ಹುಟ್ಟಿದ ಸ್ಥಳದಲ್ಲಿಯೇ ನಡೆದರೆ ಹೆಚ್ಚು ಅರ್ಥಪೂರ್ಣ ಮತ್ತು ಮೌಲ್ಯಯುತವಾಗಿರುತ್ತದೆ” ಎಂದು ಅವರು ಸಲಹೆ ನೀಡಿದ್ದಾರೆ.

ಈಗಾಗಲೇ ಮೈಸೂರು ದಸರಾ ಸಂಸ್ಕೃತಿ ಮತ್ತು ಕಂಬಳದ ಕುರಿತಾದ ಈ ಚರ್ಚೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದು, ಸರ್ಕಾರ ಈ ಕುರಿತು ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES
- Advertisment -
Google search engine

Most Popular