ಬೆಂಗಳೂರು : ಪೌರಕಾರ್ಮಿಕರ ವಿರುದ್ಧ ಜಾತಿನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಂಧನ ವಾರೆಂಟ್ ಜಾರಿ ಮಾಡಿದ್ದು, ಶಾಸಕ ಬಿ.ಪಿ.ಹರೀಶ್ ವಿರುದ್ಧ ಹರಿಹರ ಟೌನ್ ಠಾಣೆ ಪ್ರಕರಣ ದಾಖಲಾಗಿತ್ತು.
ಜಾತಿ ನಿಂದನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಜಡ್ಜ್ ಸಂತೋಷ್ ಗಜಾನನ ಭಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಮೇ 7ರಂದು ಕೋರ್ಟ್ಗೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಶಾಸಕ ಹರೀಶ್ ಗೆ ಬಂಧನ ಭೀತಿ ಎದುರಾಗಿದೆ.
ಇನ್ನು ಶಾಸಕರು ಪದೇ ಪದೇ ಗೈರಾಗುತ್ತಿರುವ ಹಿನ್ನೆಲೆ, ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯವು ವಾರೆಂಟ್ ನೀಡಿದ್ದು, ಜನಪ್ರತಿನಿಧಿಯಾಗಿ ಕಾನೂನಿಗೆ ಗೌರವ ನೀಡಬೇಕಾದವರು ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಮುಂದಿನ ವಿಚಾರಣೆಯ ವೇಳೆಗೆ ಅವರನ್ನು ನ್ಯಾಯಾಲಯಕ್ಕೆ ಕರೆತರುವಂತೆ ಆದೇಶಿಸಿದೆ.
ಕಾಡಜ್ಜಿ ಕೆರೆಯ ಅಂಗಳದಲ್ಲಿ ವ್ಯವಸಾಯಕ್ಕೆಂದು ಟ್ರ್ಯಾಕ್ಟರ್ ಗೆ ಮಣ್ಣನ್ನು ತುಂಬಿಕೊಳ್ಳುತ್ತಿದ್ದಾಗ ಸ್ಥಳಕ್ಕೆ ಬಂದ ಶಾಸಕ ಬಿ.ಪಿ.ಹರೀಶ್, ಅವರ ಪುತ್ರ ಹಾಗೂ ಆಪ್ತ ಸಹಾಯಕ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾಡಜ್ಜಿ ಗ್ರಾಮದ ನಿವಾಸಿ, ಭೋವಿ ಸಮುದಾಯದ ಕಾಂತರಾಜ್ ಎಚ್. ದೂರು ನೀಡಿದ್ದ ದೂರಿನ ಅನ್ವಯ ಪೊಲೀಸರು ಶಾಸಕ ಬಿ.ಪಿ.ಹರೀಶ್, ಅವರ ಪುತ್ರ ಹಾಗೂ ಶಾಸಕರ ಆಪ್ತ ಸಹಾಯಕನ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ನಾನು ಟ್ರ್ಯಾಕ್ಟರ್‌ನಿಂದ ಇಳಿದು ಕಾರಿನ ಬಳಿ ಹೋಗಿ ಶಾಸಕ ಹರೀಶ್ ಅವರನ್ನು ನೋಡಿದ್ದು, ನೀವು ನನ್ನ ಟ್ರ್ಯಾಕ್ಟರ್ ಅನ್ನು ಏಕೆ ತಡೆದಿದ್ದೀರಿ ಎಂದು ನಾನು ಕೇಳಿದಾಗ, ಶಾಸಕರು, ಅವರ ಮಗ ಮತ್ತು ಅವರ ಪಿಎ ಕಾರಿನಿಂದ ಇಳಿದು ನಾನು ಯಾವ ಆಧಾರದ ಮೇಲೆ ಮಣ್ಣು ತುಂಬುತ್ತೀದ್ದೀಯಾ ಎಂದು ಕೇಳಿದರು. ನಂತರ ಅವರು ನನ್ನನ್ನು ಅಸಭ್ಯವಾಗಿ ನಿಂದಿಸಿದರು ಎಂದು ದೂರುದಾರರು ಆರೋಪಿಸಿದ್ದರು.



