Friday, May 1, 2026
Google search engine

Homeರಾಜಕೀಯಸಿಎಂ ಕುರ್ಚಿ ಕಲಹ ಕಾಂಗ್ರೆಸ್‌ನಲ್ಲಿ ಗೊಂದಲ : ಇಬ್ಬರ ಜಗಳ, ಮೂರನೆಯವರಿಗೆ ಲಾಭ : ಆರ್‌.ಅಶೋಕ್‌

ಸಿಎಂ ಕುರ್ಚಿ ಕಲಹ ಕಾಂಗ್ರೆಸ್‌ನಲ್ಲಿ ಗೊಂದಲ : ಇಬ್ಬರ ಜಗಳ, ಮೂರನೆಯವರಿಗೆ ಲಾಭ : ಆರ್‌.ಅಶೋಕ್‌

ಬೆಂಗಳೂರು : ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಲಹದಿಂದ ಹೆಚ್ಚು ಗೊಂದಲ ಉಂಟಾಗಿದೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಮಲ್ಲಿಕಾರ್ಜುನ ಖರ್ಗೆ ಕೂಡ ಸಿಎಂ ಆಗಲು ಪ್ರಯತ್ನ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಕುರ್ಚಿ ಕಲಹದಿಂದಾಗಿ ಇಡೀ ಸರ್ಕಾರ ಗೊಂದಲದ ಗೂಡಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೊಸ ಹೇಳಿಕೆ ನೀಡಿ ಇನ್ನಷ್ಟು ಗೊಂದಲ ಉಂಟುಮಾಡಿದ್ದಾರೆ. ಮುಂದೆ ನನ್ನ ಪರ್ವ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದು, ಆ ಪರ್ವಕ್ಕೆ ಕಲ್ಲು ಬಿದ್ದಿದೆ. ಈಗ ಮಲ್ಲಿಕಾರ್ಜುನ ಖರ್ಗೆ ಮಧ್ಯ ಪ್ರವೇಶ ಮಾಡಿ ನನಗೂ ಆಸೆಯಿದೆ, ಹಿಂದೆ ನನಗೆ ಮೋಸವಾಗಿದೆ ಎಂದು ಹೇಳಿದ್ದಾರೆ. ಬಹುಶಃ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಅವರು ಸಿಎಂ ಆಗಲು ಗ್ರೀನ್‌ ಸಿಗ್ನಲ್‌ ಸಿಕ್ಕಿರಬಹುದು. ಖರ್ಗೆ ಸಿಎಂ ಆಗಬೇಕೆಂದು ಈಗಾಗಲೇ ಎಲ್ಲರೂ ಹೇಳಿದ್ದಾರೆ. ನಾನು ಸಿಎಂ ಆಗಲು ಸಿದ್ಧನಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ. ಇದುವರೆಗೆ ಅವರು ಬಹಳ ಪ್ರಯತ್ನ ಮಾಡಿದ್ದರೂ ಸಿಎಂ ಆಗಿರಲಿಲ್ಲ. ಈ ಸಮಯದಲ್ಲಾದರೂ ಸಿಎಂ ಆಗೋಣ ಎಂದು ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲೀಗ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತಾಗಿದೆ ಎಂದರು.

ಸಿನಿಮಾದ ಕ್ಲೈಮಾಕ್ಸ್‌ನಲ್ಲಿ ಆಗುವಂತೆಯೇ ಮಲ್ಲಿಕಾರ್ಜುನ ಖರ್ಗೆ ಬಂದಿದ್ದಾರೆ. ಮಾತುಕತೆಗೆ ಇನ್ನಷ್ಟು ಸಮಯಬೇಕೆಂದು ಅವರು ಹೇಳಿದ್ದಾರೆ. ಹಾಗೆಯೇ ಆದರೆ ಸಿಎಂ ಬದಲಾವಣೆ ಬಹಳ ತಡವಾಗುತ್ತದೆ. ಆ ವೇಳೆಗೆ ಚುನಾವಣೆ ಸಮೀಪ ಬಂದಿರುತ್ತದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಾದಂತೆ ಕಾಂಗ್ರೆಸ್‌ ಗೊಂದಲದ ಗೂಡಾಗಿ ಸರ್ವನಾಶವಾಗಲಿದೆ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ಎಲ್ಲೂ ಅಭಿವೃದ್ಧಿ ನಡೆಯುತ್ತಿಲ್ಲ. ಇಂತಹ ಸಮಯದಲ್ಲಿ ದಾವಣಗೆರೆ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಮ್ ಮುಖಂಡರ ವಿರುದ್ಧ ಕ್ರಮ ವಹಿಸಲಾಗಿದೆ. ಈಗ ಅದನ್ನು ಮರೆಮಾಚಲು ಮುಸ್ಲಿಮರಿಗೆ ಅನುದಾನ ನೀಡಲಾಗಿದೆ. ಆದರೆ ವಾಸ್ತವದಲ್ಲಿ ಮುಸ್ಲಿಮರ ಮನಸ್ಸು ಒಡೆದಿದೆ. ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಮುಸ್ಲಿಮರು ಕಾಂಗ್ರೆಸ್‌ಗೆ ಕೈ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಹದಿನೈದು ದಿನಕ್ಕೊಮ್ಮೆ ನಗರ ಪ್ರದಕ್ಷಿಣೆ ಮಾಡುತ್ತೇನೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಮೂರು ತಿಂಗಳಿಗೊಮ್ಮೆಯೂ ನಗರ ಪ್ರದಕ್ಷಿಣೆ ಮಾಡಲಿಲ್ಲ. ಮಳೆಹಾನಿಗೆ ಯಾವುದೇ ಸಿದ್ಧತೆ ಮಾಡಿಕೊಳ್ಳದೆ ಏಳು ಜೀವಗಳ ಬಲಿಯಾಗಿದೆ. ಈ ಸಾವಿಗೆ ನ್ಯಾಯ ಕೊಡಿ ಎಂದು ಜನರು ಕೇಳಿದರೆ, ತಮ್ಮ ತಪ್ಪನ್ನು ಮುಚ್ಚಿಟ್ಟು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಒಂದು ತಿಂಗಳ ಮುನ್ನ ಸಭೆ ನಡೆಸಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ವರದಿ ಪಡೆದು ದುರಸ್ತಿ ಮಾಡಿಸಬೇಕಿತ್ತು. ನೀರು ನಿಲ್ಲುವ ಕಡೆ ನೀರು ಹರಿದುಹೋಗಲು ವ್ಯವಸ್ಥೆ ಮಾಡಬೇಕಿತ್ತು. ಏನೂ ಮಾಡದೆಯೇ ಬೌರಿಂಗ್‌ ಆಸ್ಪತ್ರೆ ಮುಖ್ಯಸ್ಥರ ವಿರುದ್ಧ, ಎಂಜಿನಿಯರ್‌ಗಳ ವಿರುದ್ಧ ಕ್ರಮ ವಹಿಸಿದ್ದಾರೆ. ಆಸ್ಪತ್ರೆ ಮುಖ್ಯಸ್ಥರು ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕೆಂದು ನೋಡುತ್ತಾರೆಯೋ ಹೊರತು, ಕಾಂಪೌಂಡ್‌ ದುರಸ್ತಿ ಮಾಡುವುದು ಅವರ ಜವಾಬ್ದಾರಿಯಲ್ಲ. ಈ ಸಾವುಗಳಿಗೆ ಮುಖ್ಯಮಂತ್ರಿಯೇ ನೇರ ಕಾರಣ. ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ ಎಂದರು.

RELATED ARTICLES
- Advertisment -
Google search engine

Most Popular