Thursday, June 4, 2026
Google search engine

Homeರಾಜ್ಯಜನರ ಅಹವಾಲಿಗೆ ಪ್ರತ್ಯೇಕ ಸಚಿವಾಲಯ : ಡಿಕೆಶಿ ಘೋಷಣೆ

ಜನರ ಅಹವಾಲಿಗೆ ಪ್ರತ್ಯೇಕ ಸಚಿವಾಲಯ : ಡಿಕೆಶಿ ಘೋಷಣೆ

ಬೆಂಗಳೂರು : ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ.ಇದಕ್ಕೆ ಪೂರಕವೆಂಬಂತೆ ಇಂದು (ಜೂನ್ 04) ವಿಧಾನಸೌಧದಲ್ಲಿ ರಾಜ್ಯದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ವಿಶೇಷ ಸಭೆ ನಡೆಸಿದ್ದು, ಖಡಕ್ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ರಾಜ್ಯದ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಕುರಿತು ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ. ಇನ್ನು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಸಾರ್ವಜನಿಕ ಕುಂದು ಕೊರತೆಗಳ ನಿರ್ವಹಣೆಗೆ ಮತ್ತು ಅನಿವಾಸಿ ಭಾರತೀಯರಿಗೆ (ಎನ್ಆರ್‌ಐ) ಸಂಬಂಧಪಟ್ಟಂತೆ ಪ್ರತ್ಯೇಕ ಸಚಿವಾಲಯಗಳನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಸಾರ್ವಜನಿಕ ಕುಂದುಕೊರತೆಗೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗುವುದು. ದಿನಕ್ಕೆ ಎರಡು ಮೂರು ತಂಡ ಪ್ರತಿಭಟನೆ ಮಾಡುತ್ತಿರುತ್ತದೆ. ಅವರ ಅಹವಾಲು ಕೇಳಬೇಕಾಗಿದೆ. ಯಾಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ? ಅವರ ಬೇಡಿಕೆಗಳೇನು? ಸಮಸ್ಯೆಗಳೇನು? ಎಂಬ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಬಳಿಕ ಅವರ ಸಮಸ್ಯೆಗೆ ಸ್ಪಂದಿಸಲು, ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಪ್ರತಿನಿತ್ಯ ತಮ್ಮ ಹಕ್ಕುಗಳಿಗಾಗಿ ಅನೇಕ ಹೋರಾಟಗಾರರು, ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತವೆ.ಅವರ ಸಮಸ್ಯೆಗಳನ್ನು ಆಲಿಸುವುದು ಸರ್ಕಾರದ ಕರ್ತವ್ಯ.ಹೀಗಾಗಿ ಹೋರಾಟಗಾರರ ಆಹವಾಲುಗಳನ್ನು ಆಲಿಸಲು ಪ್ರತ್ಯೇಕ ಮಂತ್ರಿ ಹಾಗೂ ಸಚಿವಾಲಯವನ್ನು ಮಾಡಲಿದ್ದೇವೆ. ವಾರಕ್ಕೊಬ್ಬ ಸಚಿವರು ಭೇಟಿ ಮಾಡಿ ಮಾತನಾಡಲಿದ್ದಾರೆ. ಹೋರಾಟಗಾರರ ನೋವಿಗೆ ಸ್ಪಂದಿಸುವ ಕೆಲಸವನ್ನು ಈ ಸಚಿವಾಲಯ ಮಾಡಲಿದೆ ಎಂದು ವಿವರಿಸಿದರು.

ಇನ್ನು ಎನ್ಆರ್‌ಐಗೆ ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಹಲವು ಎನ್‌ಆರ್‌ಐಗಳು ರಾಜ್ಯದಲ್ಲಿ ಹೂಡಿಕೆ ಮಾಡುತ್ತಾರೆ. ಅವರ ಸಮಸ್ಯೆಗಳು, ಅವರ ಹೂಡಿಕೆಗಳಿಗೆ ಬೇಕಾದ ಪೂರಕ ವಾತಾವರಣ, ಅವರ ಸಮಸ್ಯೆ ನಿವಾರಣೆಗಾಗಿ, ಸಮನ್ವಯತೆಗಾಗಿ ಪ್ರತ್ಯೇಕ ಎನ್ಆರ್‌ಐ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

ಇನ್ನು ಅನೇಕ ವಿಚಾರವಾಗಿ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ಇರಲಿಲ್ಲ. ನಾಮಕಾವಸ್ತೆಗಾಗಿ ಆಯಾ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿ ಸುಮ್ಮನಾಗುತ್ತಿದ್ದರು. ಆದ್ರೆ, ಇದೀಗ ಪ್ರತ್ಯೇಕ ಸಚಿವಾಲಯ ರಚನೆಯಾದರೆ ಸಾರ್ವಜನಿಕರ ಕುಂದುಕೊರತೆಗಳನ್ನು ಕೇಳಲು ನಿರ್ಧಿಷ್ಟವಾದ ಸ್ಥಳ ಹಾಗೂ ಅದಕ್ಕೊಬ್ಬರು ಸಚಿವರು ಇರುತ್ತಾರೆ. ಹೀಗಾಗಿ ಜನರ ಕಷ್ಟಗಳನ್ನ ಆಲಿಸಲು ಒಂದು ಕಚೇರಿ ಇರುತ್ತೆ. ಆದ್ರೆ, ಅದು ಎಷ್ಟರ ಮಟ್ಟಿಗೆ ಜನರು ಕಷ್ಟಗಳನ್ನ ಆಲಿಸುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

RELATED ARTICLES
- Advertisment -
Google search engine

Most Popular