ಮೈಸೂರು : ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.96 ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳ ಸಭೆ ನಡೆಸಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿದರು. ಎಸ್.ಐಆರ್ ಅರ್ಹತಾ ದಿನಾಂಕವನ್ನು ಅಕ್ಟೋಬರ್ 1ಕ್ಕೆ ನಿಗದಿಪಡಿಸಲಾಗಿದೆ. ಸಿದ್ಧತೆ ಮಾಡಿಕೊಳ್ಳುವುದು, ತರಬೇತಿ ಹಾಗೂ ಮುದ್ರಣಕ್ಕೆ ಜೂನ್ 20 ರಿಂದ 29 ರವರೆಗೆ ದಿನಾಂಕ ನಿಗದಿಪಡಿಸಲಾಗಿದೆ. ಬಿ.ಎಲ್.ಒಗಳು ಜೂನ್ 30 ರಿಂದ ಜುಲೈ 29 ರವರೆಗೆ ಮನೆ- ಮನೆ ಭೇಟಿ ನೀಡಲಿದ್ದಾರೆ. ಜುಲೈ 29 ರಂದು ಮತಗಟ್ಟೆಗಳ ರಾಷನಲೈಜೇಷನ್ ಪ್ರಕ್ರಿಯೆ ನಡೆಸಲಾಗುವುದು. ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಗಸ್ಟ್ 5 ರಿಂದ ಅಕ್ಟೋಬರ್ 3 ರವರೆಗೆ ಇತ್ಯರ್ಥ ಪಡಿಸಲಾಗುವುದು. ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ವೇಳಪಟ್ಟಿ ವಿವರಿಸಿದರು.

ಜೂನ್ 30 ರಿಂದ ಜುಲೈ 29 ವರೆಗೆ ಬಿ.ಎಲ್.ಓಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ನೊಂದಣಿ ಫಾರಂ ನೀಡಲಿದ್ದಾರೆ. ನೊಂದಣಿ ಫಾರಂನ್ನು ಭರ್ತಿ ಮಾಡಿದ ನಂತರ ಜುಲೈ 29 ರೊಳಗೆ ಪಡೆದು, ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಸಾರ್ವಜನಿಕರು ತಮಗೆ ನೀಡಲಾಗುವ ಎನ್ಯೂಮರೇಷನ್ ಫಾರಂ ನಲ್ಲಿ ನಿಖರ ಮಾಹಿತಿ ಭರ್ತಿ ಮಾಡಿ ಸಹಿ ಮಾಡಿ ನೀಡುವುದು. ಮರಣ ಹೊಂದಿರುವವರು, ವಲಸೆ ಹೋಗಿರುವವರ ವಿವರ ಭರ್ತಿ ಮಾಡಿ ನೀಡುವುದು ಹಾಗೂ ಇನ್ನಿತರೆ ತಪ್ಪು ಮಾಹಿತಿ ಒದಗಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಾರತ ದೇಶದ ಪ್ರಜೆಯಾಗಿರುವ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಒಂದು ಸ್ಥಳದಲ್ಲಿ ಮಾತ್ರ ಮತದಾನದ ಹಕ್ಕು ಪಡೆದಿರಬೇಕು ಎಂಬ ಸದುದ್ದೇಶದಿಂದ ಪಾರದರ್ಶಕವಾಗಿ ಎಸ್.ಐ.ಆರ್ ಪ್ರಕ್ರಿಯೆ ನಡೆಲಾಗುತ್ತಿದೆ. ವಿವಿಧ ಪರಿಶೀಲನೆ ಹಾಗೂ ಅಗತ್ಯ ಮಾಹಿತಿ ಹಾಗೂ ದಾಖಲೆ ಪಡೆದ ನಂತರ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುವುದು ಎಂದರು.
ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು, ಪ್ರಸ್ತುತ ಇರುವ 2025ರ ಮತದಾರರ ಪಟ್ಟಿಯೊಂದಿಗೆ ಹೋಲಿಕೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ನಡೆಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ ಒ) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ 96ರಷ್ಟು ಮತದಾರರನ್ನು ಗುರುತಿಸಿ, ಕುಟುಂಬಗಳ ಲಿಂಕೇಜ್ ನೊಂದಿಗೆ ಹೊಂದಾಣಿಕೆ ಮಾಡಲಾಗಿದೆ ಎಂದರು.
ಜೂನ್ 30 ರಿಂದ ಜುಲೈ 29 ರವರೆಗೆ ಬಿ.ಎಲ್.ಒ ಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ಬಿಎಲ್.ಎ ಗಳು ಸಹ ಎಲ್ಲಾ ಮನೆಗಳಿಗೆ ಎನ್ಯೂಮರೇಷನ್ ಫಾರಂಗಳು ತಲುಪಿರುವುದು, ಭರ್ತಿ ಮಾಡಿ ಕೊಡುವ ಬಗ್ಗೆ ಸಾರ್ವಜನಿಕರು ಹಾಗೂ ಬಿ.ಎಲ್.ಒಗಳ ಜೊತೆ ಸಮನ್ವಯ ಸಾಧಿಸಿ. ರಾಜಕೀಯ ಪಕ್ಷಗಳು ಎಲ್ಲಾ ಬೂತ್ ಗಳಿಗೆ ಎಜೆಂಟ್ ಗಳನ್ನು ನೇಮಕ ಮಾಡಿ ವಿವರವನ್ನು ಒದಗಿಸಿ ಎಂದರು.
ಬಿಎಲ್ ಒಗಳು ಮನೆಗಳಿಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ, ಎನೂಮರೇಷನ್ ಫಾರಂ ತಲುಪಿಸಿ, ಮತದಾರರಿಂದ ದೃಢೀಕರಿಸಿಕೊಂಡು ಸಹಿ ಪಡೆದು ವಾಪಸ್ ತರಲಿದ್ದಾರೆ. ಸಾರ್ವಜನಿಕರು ನಮೂನೆ ಸ್ವೀಕರಿಸಿ, ಪರಿಶೀಲಿಸಿ ಕಡ್ಡಾಯವಾಗಿ ಬಿಎಲ್‌ಒಗಳಿಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ. ರಾಜಕೀಯ ಪಕ್ಷಗಳು ಈ ಬೃಹತ್ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕುಟುಂಬದ ಮುಖ್ಯಸ್ಥರ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಹೊಸದಾಗಿ ಅರ್ಹತೆ ಪಡೆಯುವ ಕುಟುಂಬದ ಇತರೆ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವುದು ಸುಲಭವಾಗುತ್ತದೆ. ಮದುವೆಯಾಗಿ ಅಥವಾ ವಲಸೆ ಬಂದು ನೆಲೆಸಿರುವವರ ಹೆಸರು ಹಳೆಯ ವೋಟರ್ ಲಿಸ್ಟ್ ನಲ್ಲಿ ಇಲ್ಲದಿದ್ದರೆ, ಅವರಿಗೆ ಫ್ಯಾಮಿಲಿ ಲಿಂಕೇಜ್ ಸಿಗುವುದಿಲ್ಲ. ಈ ಹಿಂದೆ ಅವರು ವಾಸವಾಗಿದ್ದ ಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದ್ದರೆ, ಆ ಮಾಹಿತಿ ಅನುಸಾರ ಹೆಸರು ಸೇರ್ಪಡೆ ಮಾಡಬಹುದು. ಮ್ಯಾಪಿಂಗ್ ಆಗದೆ ಇರುವವರು ಎನ್ಯೂಮರೇಟರ್ ಫಾರಂ ಜೊತೆ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲಾತಿ ಸಲ್ಲಿಸಿದರೆ ಮತಪಟ್ಟಿಗೆ ಅವರ ಹೆಸರು ಸೇರಿಸಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.



