Friday, July 3, 2026
Google search engine

Homeರಾಜ್ಯಫುಟ್‌ಪಾತ್ ಒತ್ತುವರಿ ವಿರುದ್ಧ ಸಿಡಿದೆದ್ದ ಸಚಿವರು : ತಕ್ಷಣ ತೆರವಿಗೆ ಸೂಚನೆ

ಫುಟ್‌ಪಾತ್ ಒತ್ತುವರಿ ವಿರುದ್ಧ ಸಿಡಿದೆದ್ದ ಸಚಿವರು : ತಕ್ಷಣ ತೆರವಿಗೆ ಸೂಚನೆ

ಬೆಂಗಳೂರು : ರಾಜಧಾನಿಯಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ರಸ್ತೆ ಮೂಲಸೌಕರ್ಯ ಸುಧಾರಣೆಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಗುರುವಾರ ತಡರಾತ್ರಿ ದಿಢೀರ್ ಪರಿಶೀಲನೆ ನಡೆಸಿದರು.

ಔಟರ್ ರಿಂಗ್ ರೋಡ್‌ನ ಲಾರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ವರೆಗಿನ ಭಾಗದಲ್ಲಿ ಖುದ್ದು ರೌಂಡ್ಸ್ ನಡೆಸಿದ ಸಚಿವರು, ರಸ್ತೆಗುಂಡಿಗಳು, ಚರಂಡಿಗಳ ಸ್ಥಿತಿ ಹಾಗೂ ಫುಟ್‌ಪಾತ್‌ಗಳ ಅಕ್ರಮ ಒತ್ತುವರಿಯನ್ನು ಪರಿಶೀಲಿಸಿದರು. ಈ ವೇಳೆ ಕಾಮಗಾರಿಗಳ ಕುರಿತು ಗೊಂದಲಮಯ ಮತ್ತು ಅಪೂರ್ಣ ಮಾಹಿತಿ ನೀಡಿದ ಅಧಿಕಾರಿಗಳನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. BWSSB, KPTCL ಹಾಗೂ BESCOM ಇಲಾಖೆಗಳ ನಡುವೆ ಸಮನ್ವಯ ಕೊರತೆಯನ್ನು ಪ್ರಶ್ನಿಸಿದ ಅವರು, ಬೇಜವಾಬ್ದಾರಿತನವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಫುಟ್‌ಪಾತ್ ವ್ಯಾಪಾರಿಗಳಿಗೆ ಸೂಚನೆ ನೀಡಿದ ಸಚಿವರು, ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ಮಾಡದೆ ನಿಗದಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಿ ಎಂದು ತಿಳಿಸಿದರು. ಪಾದಚಾರಿಗಳ ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು, ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಸುಮಾರು 300 ಪಾದಚಾರಿಗಳು ಸಾವನ್ನಪ್ಪುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದರು.

ನಿಮ್ಮ ಕುಟುಂಬದವರು ಇದೇ ರೀತಿಯ ಪರಿಸ್ಥಿತಿಗೆ ಒಳಗಾದರೆ ಹೇಗಿರುತ್ತದೆ? ಎಂದು ಭಾವುಕರಾಗಿ ಪ್ರಶ್ನಿಸಿದ ಸಚಿವರು, ಫುಟ್‌ಪಾತ್ ತೆರವು ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ದೊಡ್ಡ ಕಟ್ಟಡಗಳ ಮುಂಭಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುವ ಎಲ್ಲ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವುದಾಗಿ ಸಚಿವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular