Wednesday, May 20, 2026
Google search engine

Homeರಾಜ್ಯಹೋಲ್‌ಸೇಲ್ ಖರೀದಿ ನೆಪದಲ್ಲಿ 3 ಕೋಟಿ ಮೌಲ್ಯದ ಚಿನ್ನ ಕಳ್ಳತನ

ಹೋಲ್‌ಸೇಲ್ ಖರೀದಿ ನೆಪದಲ್ಲಿ 3 ಕೋಟಿ ಮೌಲ್ಯದ ಚಿನ್ನ ಕಳ್ಳತನ

ಬೆಂಗಳೂರು: ಹೋಲ್‌ಸೇಲ್ ಚಿನ್ನ ಖರೀದಿಸುವುದಾಗಿ ನಂಬಿಸಿ 1 ಕೆಜಿ 850 ಗ್ರಾಂ ಚಿನ್ನಾಭರಣ ಬರೊಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆದಿದೆ.

ಪರೇಶ್ ಸೋನಿ, ಶ್ಯಾಮ್ ಹಾಗೂ ಚಂದ್ರಶೇಖರ್ ರಾವ್ ಕಳ್ಳತನ ಮಾಡಿದ ಆರೋಪಿಗಳು. ನಗರ್ತಪೇಟೆಯ ಮೆಹ್ತಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ಮಹೇಂದ್ರ ಕುಮಾರ್ ಜೈನ್ ನೀಡಿದ ದೂರಿನ ಮೇರೆಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪರೇಶ್ ಸೋನಿ ಎಂಬಾತ ತಾನು ಹೋಲ್‌ಸೇಲ್ ಚಿನ್ನದ ವ್ಯಾಪಾರಿ ಎಂದು ಪರಿಚಯಿಸಿಕೊಂಡು, 3 ಕೆಜಿ ಚಿನ್ನದ ಆಭರಣಗಳು ಬೇಕೆಂದು ಅಂಗಡಿಗೆ ಕರೆ ಮಾಡಿದ್ದ. ಬಳಿಕ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ತನ್ನ ಕಚೇರಿಗೆ ಆಭರಣಗಳ ಸ್ಯಾಂಪಲ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದ. ಅದರಂತೆ ಮಹೇಂದ್ರ ಕುಮಾರ್ ಜೈನ್ ಹಾಗೂ ಮತ್ತೊಬ್ಬ ಸಿಬ್ಬಂದಿ 3 ಕೆಜಿ ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ತೆಗೆದುಕೊಂಡು ಆರೋಪಿಯ ಕಚೇರಿಗೆ ತೆರಳಿದ್ದರು.

ಈ ವೇಳೆ ಪರೇಶ್ ಸೋನಿಯು ಚಂದ್ರಶೇಖರ್ ಮತ್ತು ಶ್ಯಾಮ್ ಎಂಬುವವರನ್ನು ಮಹೇಂದ್ರ ಅವರಿಗೆ ಪರಿಚಯ ಮಾಡಿಸಿದ್ದ. ಡಿಸೈನ್ ನೋಡುವ ನೆಪದಲ್ಲಿ 1 ಕೆಜಿ 850 ಗ್ರಾಂ ತೂಕದ ಚಿನ್ನಾಭರಣಗಳನ್ನು ತೆಗೆದುಕೊಂಡ ಚಂದ್ರಶೇಖರ್ ರಾವ್ ಅಲ್ಲಿಂದ ಪರಾರಿಯಾಗಿದ್ದ. ಚಂದ್ರಶೇಖರ್‌ನನ್ನು ಹುಡುಕೋದಾಗಿ ಹೇಳಿ ಜೊತೆಗಿದ್ದ ಇನ್ನಿಬ್ಬರು ಆರೋಪಿಗಳು ಕೂಡ ಎಸ್ಕೇಪ್ ಆಗಿದ್ದಾರೆ.

ಕಳವಾಗಿರುವ ಚಿನ್ನಾಭರಣಗಳ ಮೌಲ್ಯ ಅಂದಾಜು 3 ಕೋಟಿ ರೂ. ಎಂದು ಹೇಳಲಾಗಿದೆ. ಆರೋಪಿಗಳು ಪೂರ್ವಯೋಜಿತವಾಗಿ ಮೋಸ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES
- Advertisment -
Google search engine

Most Popular