ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ನಟನಿಂದ ರಾಜಕಾರಣಿಯಾಗಿ ಬದಲಾಗಿರುವ ಸಿ. ಜೋಸೆಫ್ ವಿಜಯ್ ಅವರು ಇಂದು (ಮೇ 9) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕಿದೆ. ಆದರೆ, ಅದಕ್ಕೂ ಮುನ್ನವೇ ರಾಜ್ಯದಲ್ಲಿ ರಾಜಕೀಯ ಸಂಚಲನ ಶುರುವಾಗಿದೆ.
ಟಿವಿಕೆ (TVK) ಪಕ್ಷವು ತನ್ನ ಶಾಸಕ ಕಾಮರಾಜ್ ಅವರ ಹೆಸರಿನಲ್ಲಿ ನಕಲಿ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದೆ ಎಂದು ಎಂಎಂಕೆ (AMMK) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಕ್ರಿಮಿನಲ್ ದೂರು ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.
ಬೆಂಬಲ ಪತ್ರದ ಬಗ್ಗೆ ದಿನಕರನ್ ಹೇಳಿದ್ದೇನು?
ಶುಕ್ರವಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿದ ದಿನಕರನ್, ಟಿವಿಕೆ ಸಲ್ಲಿಸಿರುವ ಪತ್ರವು “ಬೆರಳೆಣಿಕೆಯ ಶಾಸಕರ ಕುದುರೆ ವ್ಯಾಪಾರ ಮತ್ತು ನಕಲಿ ಸಹಿಯ ಸಂಚು” ಎಂದು ದೂರಿದ್ದಾರೆ. ನಮ್ಮ ಪಕ್ಷದ ಏಕೈಕ ಶಾಸಕ ಕಾಮರಾಜ್ ಎಸ್. ಅವರು ಎನ್‌ಡಿಎ (NDA) ಮತ್ತು ಎಐಎಡಿಎಂಕೆ (AIADMK) ಮೈತ್ರಿಕೂಟವನ್ನು ಬೆಂಬಲಿಸಲಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಎಐಎಡಿಎಂಕೆಯ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರೇ ಸೂಕ್ತ ಅಭ್ಯರ್ಥಿ ಮತ್ತು ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ದಿನಕರನ್ ಸ್ಪಷ್ಟಪಡಿಸಿದ್ದಾರೆ.
“ಇದು ಪ್ರಜಾಪ್ರಭುತ್ವದ ಅಣಕ”
ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ನಂತರ ದಿನಕರನ್ ಮಾಧ್ಯಮಗಳೊಂದಿಗೆ ಮಾತನಾಡಿ “ನಾನು ಈಗಾಗಲೇ ಪಳನಿಸ್ವಾಮಿ ಅವರ ಬೆಂಬಲಕ್ಕೆ ಪತ್ರ ಬರೆದಿದ್ದೇನೆ, ಅದಕ್ಕೆ ನಮ್ಮ ಶಾಸಕ ಕಾಮರಾಜ್ ಸಹಿ ಮಾಡಿದ್ದಾರೆ. ಆದರೆ ಟಿವಿಕೆ ಬಳಿ ಇರುವ ಪತ್ರ ಯಾವುದೋ ನಕಲಿ ದಾಖಲೆ ಇರಬಹುದು. ಸಂಜೆ 6.30ರ ಸುಮಾರಿಗೆ ನನ್ನ ಶಾಸಕರು ಸಹಿ ಮಾಡಿದ ಪತ್ರವನ್ನು ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಟಿವಿಯಲ್ಲಿ ನಮ್ಮ ಪಕ್ಷ ವಿಜಯ್ ಅವರಿಗೆ ಬೆಂಬಲ ನೀಡಿದೆ ಎಂಬ ಸುದ್ದಿ ನೋಡಿ ನಾನು ದಂಗಾದೆ. ಹಾಗಾಗಿ ಕೂಡಲೇ ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ತನಿಖೆಗೆ ಮನವಿ ಮಾಡಿದ್ದೇನೆ” ಎಂದರು.
ಪಳನಿಸ್ವಾಮಿ ಸಿಎಂ ಅಭ್ಯರ್ಥಿ
ದಿನಕರನ್ ಅವರು ಇಪಿಎಸ್ (EPS) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪುನರುಚ್ಚರಿಸಿದ್ದಾರೆ. “ಇದು ಶಾಸಕರ ಖರೀದಿ ಅಥವಾ ನಕಲಿ ದಾಖಲೆ ಸೃಷ್ಟಿಸುವ ಕೃತ್ಯ. ಇದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ. ನಾವು ಎನ್‌ಡಿಎ ಮೈತ್ರಿಕೂಟದಲ್ಲಿದ್ದೇವೆ ಮತ್ತು ಎಐಎಡಿಎಂಕೆ ಜೊತೆಗೂಡಿ ಚುನಾವಣೆ ಎದುರಿಸಿದ್ದೇವೆ,” ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕೆಂದು ದಿನಕರನ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಪ್ರಸ್ತುತ ತಮಿಳುನಾಡಿನಲ್ಲಿ ವಿಜಯ್ ಅವರ ಪ್ರಮಾಣವಚನ ಸಮಾರಂಭದ ಮೇಲೆ ಈ ಬೆಳವಣಿಗೆಗಳು ಯಾವ ಪರಿಣಾಮ ಬೀರಲಿವೆ ಎಂಬುದು ಕುತೂಹಲ ಮೂಡಿಸಿದೆ (ಏಜೆನ್ಸಿಸ್)



