ನವದೆಹಲಿ : ಹಿಂದೂ ಮಹಾಸಾಗರವು ಭಾರತ ಮತ್ತು ಸೆಶೆಲ್ಸ್ ದೇಶಗಳನ್ನು ಪ್ರತ್ಯೇಕಿಸುವುದಿಲ್ಲ, ಬದಲಿಗೆ ಎರಡೂ ರಾಷ್ಟ್ರಗಳನ್ನು ಪರಸ್ಪರ ಜೋಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೆಶೆಲ್ಸ್‌ನ ನ್ಯಾಷನಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಹಿಂದೂ ಮಹಾಸಾಗರದ ದೃಷ್ಟಿಕೋನದಲ್ಲಿ ಸೆಶೆಲ್ಸ್‌ಗೆ ವಿಶೇಷ ಸ್ಥಾನವಿದೆ. ಉಭಯ ದೇಶಗಳ ಸಂಬಂಧವು ಸರ್ಕಾರಗಳಿಗಿಂತ ಮುಂಚಿತವಾಗಿ ಜನರ ನಡುವೆ ಬೆಳೆದುಬಂದಿದೆ ಎಂದು ತಿಳಿಸಿದರು.
ಸೆಶೆಲ್ಸ್‌ನ ನ್ಯಾಷನಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೋದಿ, “ಸ್ಪೀಕರ್ ಸಿಲ್ವೇನ್ ಲಿಬಿಯನ್, ಸರ್ಕಾರದ ನಾಯಕ ಬರ್ನಾರ್ಡ್ ಜಾರ್ಜ್, ವಿರೋಧ ಪಕ್ಷದ ನಾಯಕರು, ನ್ಯಾಷನಲ್ ಅಸೆಂಬ್ಲಿಯ ಗೌರವಾನ್ವಿತ ಸದಸ್ಯರು ಹಾಗೂ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಿಮಗೆಲ್ಲರಿಗೂ ನಮಸ್ಕಾರ. ಈ ಪ್ರತಿಷ್ಠಿತ ಸದನವನ್ನು ಉದ್ದೇಶಿಸಿ ಮಾತನಾಡುವುದು ನನಗೆ ಸಂದ ಗೌರವ” ಎಂದು ಹರ್ಷ ವ್ಯಕ್ತಪಡಿಸಿದರು.
‘ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್’ ಗೌರವ
ತಮಗೆ ನೀಡಿದ ಭವ್ಯ ಸ್ವಾಗತಕ್ಕಾಗಿ ಸ್ಪೀಕರ್ ಅವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ, ತಮಗೆ ಭಾನುವಾರ ‘ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್’ ಪ್ರಶಸ್ತಿ ನೀಡಿ ಗೌರವಿಸಿದ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಮತ್ತು ಸೆಶೆಲ್ಸ್‌ನ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಈ ಗೌರವವು ಪರಿಸರ ಸಂರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಪ್ರೇರಣೆ ನೀಡಲಿದೆ ಎಂದು ಅವರು ಹೇಳಿದರು. ಇದೇ ವೇಳೆ, ಭಾರತದ 140 ಕೋಟಿ ಜನರ ಪರವಾಗಿ ಅವರು ಸೆಶೆಲ್ಸ್ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.
ಸೆಶೆಲ್ಸ್‌ನೊಂದಿಗೆ ಹಳೆಯ ನಂಟು
“ನಾನು ಪ್ರಧಾನಿಯಾದ ನಂತರ 2015 ರಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕೈಗೊಂಡ ಮೊದಲ ವಿದೇಶಿ ಪ್ರವಾಸ ಸೆಶೆಲ್ಸ್ ಆಗಿತ್ತು. ಇದು ನನ್ನ ಆಫ್ರಿಕಾ ಖಂಡದ ಮೊದಲ ಭೇಟಿಯೂ ಹೌದು. ಭಾರತದ ಹಿಂದೂ ಮಹಾಸಾಗರದ ನೀತಿಯಲ್ಲಿ ಸೆಶೆಲ್ಸ್‌ಗೆ ವಿಶೇಷ ಪ್ರಾಮುಖ್ಯತೆ ಇರುವುದರಿಂದಲೇ ನಾನು ಮೊದಲು ಈ ದೇಶವನ್ನು ಆಯ್ಕೆ ಮಾಡಿಕೊಂಡೆ” ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡರು.
ಸೆಶೆಲ್ಸ್ ಸ್ವಾತಂತ್ರ್ಯದ 50 ವರ್ಷಗಳ ಸಂಭ್ರಮಕ್ಕೆ ಶುಭ ಕೋರಿದ ಪ್ರಧಾನಿ, ಭಾರತ ಮತ್ತು ಸೆಶೆಲ್ಸ್ ಸ್ನೇಹ ಕೇವಲ 50 ವರ್ಷಗಳ ರಾಜತಾಂತ್ರಿಕ ಸಂಬಂಧಕ್ಕೆ ಸೀಮಿತವಾಗಿಲ್ಲ, ಇದರ ಇತಿಹಾಸ ತೀರಾ ಹಳೆಯದು ಎಂದರು.
ಆಗಸ್ಟ್ 1770 ರಲ್ಲಿ ‘ಟೆಲಿಮಾಕ್’ ಹಡಗಿನ ಮೂಲಕ ಸೇಂಟ್ ಆನ್ ದ್ವೀಪವನ್ನು ತಲುಪಿದ ಜನರಲ್ಲಿ ಐದು ಮಂದಿ ಭಾರತೀಯರಿದ್ದರು.ಅಲ್ಲಿಂದಲೇ ಉಭಯ ದೇಶಗಳ ನಡುವಿನ ಮಾನವೀಯ ಸಂಬಂಧಗಳು ಆರಂಭವಾದವು. ಕಾಲಕ್ರಮೇಣ ಭಾರತೀಯ ಸಮುದಾಯವು ಆಧುನಿಕ ಸೆಶೆಲ್ಸ್ ಇತಿಹಾಸದ ಅವಿಭಾಜ್ಯ ಅಂಗವಾಯಿತು.
ಸಂಸ್ಕೃತಿಯೇ ಉಭಯ ದೇಶಗಳ ಶಕ್ತಿ
“ನಮ್ಮ ಸಂಬಂಧಗಳನ್ನು ಸರ್ಕಾರಗಳು ನಿರ್ಮಿಸಿಲ್ಲ. ಇದನ್ನು ಜನರು ಬೆಳೆಸಿದ್ದಾರೆ, ಕುಟುಂಬಗಳು ಮುನ್ನಡೆಸಿವೆ ಮತ್ತು ತಲೆಮಾರುಗಳು ಪೋಷಿಸಿಕೊಂಡು ಬಂದಿವೆ. ಹೀಗಾಗಿಯೇ ನಾವು ಅಪರಿಚಿತರಂತೆ ಭೇಟಿಯಾಗುವುದಿಲ್ಲ, ಬದಲಿಗೆ ಹಳೆಯ ಸ್ನೇಹಿತರಂತೆ ಒಂದಾಗುತ್ತೇವೆ” ಎಂದು ಮೋದಿ ಭಾವುಕರಾಗಿ ನುಡಿದರು.
ಸೆಶೆಲ್ಸ್‌ನ ವೈವಿಧ್ಯಮಯ ಸಂಸ್ಕೃತಿಯನ್ನು ಶ್ಲಾಘಿಸಿದ ಅವರು, ಜಗತ್ತಿನ ವಿವಿಧ ಭಾಗಗಳಿಂದ ಬಂದ ಜನರು ತಮ್ಮ ಭಾಷೆ, ಸಂಪ್ರದಾಯಗಳನ್ನು ಒಟ್ಟಾಗಿ ತಂದು ಒಂದು ಹಂಚಿಕೆಯ ‘ಸೆಶೆಲ್ವಾ’ ಗುರುತನ್ನು ನಿರ್ಮಿಸಿದ್ದಾರೆ. ನ್ಯಾಷನಲ್ ಅಸೆಂಬ್ಲಿಯ ಧ್ಯೇಯವಾಕ್ಯವಾದ ‘ವೈವಿಧ್ಯತೆಯಲ್ಲಿ ಏಕತೆ’ (Unity in Diversity) ಈ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಇದು ಅಲ್ಲಿನ ಕ್ರಿಯೋಲ್ ಸಂಗೀತ, ಮೌತ್ಯಾ ನೃತ್ಯ ಮತ್ತು ಫೆಸ್ಟಿವಲ್ ಕ್ರಿಯೋಲ್‌ನಂತಹ ಆಚರಣೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.
ಆಹಾರ ಮತ್ತು ಹಬ್ಬಗಳ ಸಾದೃಶ್ಯ
ಭಾರತ ಮತ್ತು ಸೆಶೆಲ್ಸ್‌ನ ಸಾಂಸ್ಕೃತಿಕ ಸಂಬಂಧಗಳು ದಿನನಿತ್ಯದ ಜೀವನದಲ್ಲೂ ಹಾಸುಹೊಕ್ಕಾಗಿವೆ ಎಂದ ಪ್ರಧಾನಿ, ಅಲ್ಲಿನ ‘ಕಾರಿ ಕೋಕೊ’, ಸಮೋಸಾ ಮತ್ತು ಚಟ್ನಿಯ ರುಚಿಯಿಂದ ಹಿಡಿದು, ದೀಪಾವಳಿ, ಥಾಯ್ ಪೊಂಗಲ್ ಮತ್ತು ನವರಾತ್ರಿಯ ಸಂದರ್ಭದಲ್ಲಿ ಆಚರಿಸಲಾಗುವ ಗರ್ಬಾ ನೃತ್ಯಗಳವರೆಗೆ ಉಭಯ ದೇಶಗಳ ಸಾಂಸ್ಕೃತಿಕ ಬಂಧ ಪ್ರಬಲವಾಗಿದೆ ಎಂದರು. ಈ ಹಂಚಿಕೆಯ ಸಾಂಸ್ಕೃತಿಕ ಪರಂಪರೆ ಮತ್ತು ಕ್ರಿಯೋಲ್ ಮನೋಭಾವವು ಭವಿಷ್ಯದಲ್ಲಿ ಭಾರತ-ಸೆಶೆಲ್ಸ್ ಸ್ನೇಹವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. (ಏಜೆನ್ಸಿಸ್)



