ಬೆಂಗಳೂರು : ಮಹಿಳೆಯರೊಂದಿಗಿನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಡಾ.ಕೆ.ರಾಮಚಂದ್ರರಾವ್ ಅವರನ್ನು ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಹೊಸ ಹುದ್ದೆ ನೇಮಕ ಮಾಡಲಾಗಿದೆ.
ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್ ಅನುಚಿತ ವರ್ತನೆ ಕುರಿತಾದ ವಿಡಿಯೋಗಳು ವೈರಲ್ ಆಗಿದ್ದವು. ಬಳಿಕ ತನಿಖೆಯಲ್ಲಿ ಅವು ಅಸಲಿ ಎಂಬ ಸಂಗತಿ ಬಯಲಾಗಿತ್ತಾದರೂ ಇದೀಗ ಅಮಾನತು ಆದೇಶವನ್ನು ಹಿಂಪಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನೂ ಡೈರೆಕ್ಟರ್ ಜನರಲ್ ಆಫ್ ಪೊಲೀಸ್(ಪೊಲೀಸ್ ಮ್ಯಾನುಯೆಲ್) ಎನ್ನುವ ಹೊಸ ಹುದ್ದೆ ಸೃಷ್ಟಿಸಿ ಈ ಹುದ್ದೆಗೆ ರಾಮಚಂದ್ರರಾವ್ ಅವರನ್ನು ನೇಮಕ ಮಾಡಲಾಗಿದ್ದು, ಆಲ್ ಇಂಡಿಯಾ ಸರ್ವಿಸ್ ನಿಯಮಗಳಡಿ ರಾಮಚಂದ್ರರಾವ್ ಅವರ ಅಮಾನತು ಆದೇಶ ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಜನವರಿಯಲ್ಲಿ ವಿಡಿಯೋಗಳು ಬಹಿರಂಗವಾಗಿ ಅವರನ್ನು ಜನವರಿ 19 ರಂದು ಅಮಾನತುಗೊಳಿಸಿ ಸರ್ಕಾರ ಆದೇಶಿಸಿತ್ತು. ಐದು ತಿಂಗಳ ನಂತರ ಅಮಾನತು ಆದೇಶ ಹಿಂಪಡೆದ ಸರ್ಕಾರ ಪೊಲೀಸ್ ನಿಯಮಾವಳಿ ಡಿಜಿಪಿಯಾಗಿ ನೇಮಕ ಮಾಡಿದೆ. ವರದಿ ಆಧರಿಸಿ ವಿಚಾರಣೆ ನಡೆಸುವ ಬಗ್ಗೆ ಸರ್ಕಾರ ಚಿಂತಿಸಿತ್ತು. ಆದರೆ ಈ ಕುರಿತಾಗಿ ತೀರ್ಮಾನ ಕೈಗೊಳ್ಳದೆ ರಾಮಚಂದ್ರರಾವ್ ಅವರ ಅಮಾನತು ಆದೇಶ ರದ್ದು ಮಾಡಿ ಹೊಸ ಹುದ್ದೆಗೆ ನೇಮಕ ಮಾಡಲಾಗಿದೆ. ಇದೇ ತಿಂಗಳಾಂತ್ಯಕ್ಕೆ ಸೇವೆಯಿಂದ ರಾವ್ ಅವರು ನಿವೃತ್ತರಾಗಲಿದ್ದಾರೆ.



