ಬೆಂಗಳೂರು : ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶವನ್ನು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯದ ಸಾಲ ಹೆಚ್ಚಳ ಮಾಡಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿರುವ ದಾಖಲೆ ಬರೆದಿದ್ದು, ಸಾಧನೆಗಿಂತ ಸಾಲದ ದಾಖಲೆ ಮಾಡಿರುವುದೇ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ, ಪೆಟ್ರೋಲ್-ಡೀಸೆಲ್ ಹಾಗೂ ನೀರಿನ ದರಗಳನ್ನು ಹೆಚ್ಚಿಸಿ ರಾಜ್ಯದ ಸಾಲವನ್ನು ಹೆಚ್ಚಿಸಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿದ ದಾಖಲೆ ಬರೆದಿದ್ದಾರೆ. ಆದ್ದರಿಂದ ಸಾಧನಾ ಸಮಾವೇಶದ ಬದಲು ‘ಸಾಲದ ದಾಖಲೆ ಸಮಾವೇಶ’ ಮಾಡಿದರೆ ಹೆಚ್ಚು ಸೂಕ್ತವಾಗಿರುತ್ತದೆ ಎಂದು ಟೀಕಿಸಿದ್ದಾರೆ.
ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಬಡವರಿಗೆ ಹೊಸ ಮನೆ ನೀಡಿಲ್ಲ, ರಸ್ತೆ ನಿರ್ಮಾಣ ಮಾಡಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಔಷಧಿಗಳ ಕೊರತೆ ಇದೆ. ಶಾಲೆಗಳಲ್ಲಿ ಶಿಕ್ಷಕರ ಅಭಾವದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ಆರೋಪಿಸಿದರಲ್ಲದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಗ್ರಾಮೀಣ ಭಾಗಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಪೊಲೀಸ್ ಠಾಣೆಗಳು ವಸೂಲಿ ಕೇಂದ್ರಗಳಾಗಿವೆ ಎಂದು ದೂರಿದರು.
ಸರ್ಕಾರದ ಒಳಗೆ ಅಧಿಕಾರದ ಕುರ್ಚಿಗಾಗಿ ನಿರಂತರ ಪೈಪೋಟಿ ನಡೆಯುತ್ತಿದ್ದು, ಈ ಸಮಾವೇಶ ಸರ್ಕಾರದ ಶಕ್ತಿ ಪ್ರದರ್ಶನದ ಭಾಗವೇ ಎಂಬ ಅನುಮಾನ ಜನರಲ್ಲಿ ಮೂಡಿದೆ. ರಾಜ್ಯದ ಜನರು ಭ್ರಷ್ಟಾಚಾರ ಮತ್ತು ಒಳಜಗಳಗಳಿಂದ ಬೇಸತ್ತಿದ್ದು, ಈ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಕಾಯುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.



