ಕೆ.ಆರ್.ನಗರ: ಪಟ್ಟಣದ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದ್ದು ಅಗತ್ಯವಾಗಿರುವ ಅನುದಾನ ಬಿಡುಗಡೆ ಮಾಡಿಸಿ ಮೂಲಭೂತ ಸವಲತ್ತುಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
16 ಮತ್ತು 17 ನೇ ವಾರ್ಡಿನ ವ್ಯಾಪ್ತಿಯ ರಸ್ತೆ ಕಾಮಗಾರಿಗಳಿಗೆ ಮುಳ್ಳೂರು ರಸ್ತೆಯ ಬಳಿ ಬುಧವಾರ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು 7.50 ಕೋಟಿ ರೂಪಾಯಿಗಳ ಕೆಲಸಗಳು ಆರಂಭವಾಗಿವೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಅಭಿವೃದ್ದಿ ಅನುದಾನದ ವಿವೇಚನಾ ಕೋಟಾದ ಹಣದಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಇದರ ಜತೆಗೆ ಮತ್ತಷ್ಠು ಅನುದಾನ ಕೊಡುವುದಾಗಿ ಪ್ರಕಟಿಸಿದ ಅವರು ಈಗಾಗಲೇ ಸರ್ಕಾರಕ್ಕೆ ಪಟ್ಟಣ, ಅಭಿವೃದ್ದಿ ಅನುದಾನದಡಿ ಮತ್ತಷ್ಠು ಹಣ ಒದಗಿಸವಂತೆ ಕೋರಲಾಗಿದೆ ಎಂದರು.
ಮುಖ್ಯಮಂತ್ರಿಗಳು ಮತ್ತೆ 25 ಕೋಟಿ ಅಭಿವೃದ್ದಿ ಅನುದಾನ ನೀಡಲಿದ್ದು ಆ ಹಣವನ್ನು ಅಗತ್ಯವಿರುವೆಡೆ ಬಳಕೆ ಮಾಡುವುದಾಗಿ ಘೋಷಿಸಿದ ಶಾಸಕರು ಕೆ.ಆರ್.ನಗರ ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆಂದು ಪ್ರಕಟಿಸಿದರು.

ಪುರಸಭೆ ವ್ಯಾಪ್ತಿಯ 16 ಮತ್ತು 17 ನೇ ವಾರ್ಡುಗಳ ನಾಗರೀಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಗ್ರಂಥಾಲಯ ಆರಂಬಿಸಲು ಹಣ ಬಿಡುಗಡೆಯಾಗಿದ್ದು ಶೀಘ್ರದಲ್ಲಿಯೆ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆಂದು ಮಾಹಿತಿ ನೀಡಿದರು.
ಭವಿಷ್ಯದಲ್ಲಿ ಪಟ್ಟಣದ 23 ವಾರ್ಡುಗಳಿಗೂ ಸಮರ್ಪಕವಾಗಿ ಶುದ್ದ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ವಹಿಸಿದ್ದು ಪ್ರಸ್ತುತ ಪ್ರಗತಿಯಲ್ಲಿರುವ ಅಮೃತ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಮುಗಿದ ನಂತರ ಆ ಸಮಸ್ಯೆಯೂ ಬಗೆಹರಿಯಲಿದೆ ಎಂದು ಹೇಳಿದರು.
ಪಟ್ಟಣ ಸೇರಿದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಕೋಟಿ ರೂಗಳ ವಿವಿದ ಅಭಿವೃದ್ದಿ ಕೆಲಸಗಳು ನಡೆಯುತ್ತಿದ್ದು ಅವುಗಳು ನಿಮ್ಮ ಕಣ್ಣ ಮುಂದೆ ಪ್ರಗತಿಯಲ್ಲಿದ್ದು ಚುನಾವಣೆಗೆ ಮುಂಚೆ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು ಗ್ಯಾರಂಟಿ ಯೋಜನೆಗಳ ಜತೆಗೆ ರಾಜ್ಯಾಧ್ಯಂತ ಅಭಿವೃದ್ದಿ ಪರವಾದ ಕೆಲಸಗಳು ನಡೆಯುತ್ತಿವೆ ಎಂದು ಹೆಮ್ಮೆಯಿಂದ ನುಡಿದರು.ಈ ಸಂದರ್ಭದಲ್ಲಿ ಎರಡು ಬಡಾವಣೆಗಳ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು ಅಗತ್ಯವಿರುವ ಬೇಡಿಕೆಗಳು ಮತ್ತು ಸಮಸ್ಯೆಗಳ ಪರಿಹಾರಕ್ಕೆ ಆಧ್ಯತೆ ನೀಡುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಅವರು ಬಸವೇಶ್ವರ ಬಡಾವಣೆಯ ಶಿಶುವಿಹಾರ ಅಭಿವೃದ್ದಿ ಕಾಮಗಾರಿ, ಮೈಸೂರು ಮುಖ್ಯ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಸಿ.ಎಂ.ರಸ್ತೆಯಿಂದ ಮಠದ ರಸ್ತೆ ಅಭಿವೃದ್ದಿ ಕಾಮಗಾರಿ, ವೀರಶೈವ ಸ್ಮಶಾನದ ಅಭಿವೃದ್ದಿ, 12 ನೇ ವಾರ್ಡಿನ ರಸ್ತೆ ಆಭಿವೃದ್ದಿ, ಗರುಡಗಂಭದ ವೃತ್ತದಿಂದ ಜಾಮೀಯಾ ಮಸೀದಿ ರಸ್ತೆ ಕಾಮಗಾರಿ, 2 ನೇ ವಾರ್ಡಿನ ರಸ್ತೆ ಅಭಿವೃದ್ದಿ ಕಾಮಗಾರಿ, ದಿಡ್ಡೇದಮ್ಮ ರಸ್ತೆಅಭಿವೃದ್ದಿಯ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಶಿವುನಾಯಕ್, ಕೆ.ಜಿ.ಸುಬ್ರಹ್ಮಣ್ಯ, ಮಾಜಿ ಸದಸ್ಯರಾದ ನಟರಾಜು, ಕೋಳಿಪ್ರಕಾಶ್, ಕೆ.ವಿನಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯಸ್ ಜಾಬೀರರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ನಾಗರಾಜು, ಪುರಸಭೆ ಮುಖ್ಯಾಧಿಕಾರಿ ರಮೇಶ್, ನಿರ್ದೇಶಕ ದಿಡ್ಡಹಳ್ಳಿಬಸವರಾಜು, ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕು ಘಟಕದ ನಿರ್ದೇಶಕರಾದ ಜತ್ತಿಪ್ರಕಾಶ್, ಸೋಮೇಶ್, ವಕೀಲ ಕೆ.ಸಿ.ಹರೀಶ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ದಿನೇಶ್ ಮತ್ತಿತರರು ಇದ್ದರು.



