ಹಾಸನ : ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ವಿಚಾರದಲ್ಲಿ ಗಂಭೀರ ಅಕ್ರಮ ನಡೆದಿರುವ ಅನುಮಾನ ವ್ಯಕ್ತಪಡಿಸಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಪ್ರಕರಣವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಮತ ಎಣಿಕೆ ಪೂರ್ಣಗೊಂಡ ಬಳಿಕ ಕೆಲವು ಪೋಸ್ಟಲ್ ಬ್ಯಾಲೆಟ್‌ಗಳಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದರಲ್ಲದೆ, “ಎಲ್ಲಾ ಪಕ್ಷಗಳ ಏಜೆಂಟ್‌ಗಳು ಸಹಿ ಹಾಕಿದ ನಂತರವೂ ಮತಗಳಲ್ಲಿ ಬದಲಾವಣೆ ಮಾಡಲಾಗಿದೆ. ಕೆಲ ಮತಪತ್ರಗಳಲ್ಲಿ ಮೊದಲಿಗೆ ಹಾಕಿದ್ದ ಟಿಕ್ ಮಾರ್ಕ್ ಕೆಳಭಾಗದಲ್ಲಿ ಬೇರೆ ಇಂಕ್ ಬಳಸಿ ಮತ್ತೊಂದು ಟಿಕ್ ಹಾಕಿ ಅವನ್ನು ಅಮಾನ್ಯಗೊಳಿಸಲಾಗಿದೆ. ಇದು ಸಂಪೂರ್ಣ ಕ್ರಿಮಿನಲ್ ಸಂಚು” ಎಂದು ಟೀಕಿಸಿದರು.
ಇನ್ನೂ ಈ ಕುರಿತು ಸತ್ಯಾಂಶ ಬಹಿರಂಗವಾಗಲು ಫರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (FSL)ಗೆ ಮತಪತ್ರಗಳನ್ನು ಕಳುಹಿಸಿ, ಮೇಲಿನ ಮತ್ತು ಕೆಳಗಿನ ಟಿಕ್ ಮಾರ್ಕ್‌ಗಳಿಗೆ ಬಳಸಿದ ಇಂಕ್ ಒಂದೇನಾ ಅಥವಾ ಬೇರೆನಾ ಎಂಬುದನ್ನು ಪರೀಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಲ ಅಧಿಕಾರಿಗಳು ನಿರ್ದಿಷ್ಟ ಅಭ್ಯರ್ಥಿಗೆ ಬಂದ ಮತಗಳನ್ನು ಒಂದೇ ಬಂಡಲ್‌ನಲ್ಲಿ ಇಟ್ಟು, ಬಳಿಕ ಟ್ಯಾಂಪರಿಂಗ್ ನಡೆಸಿರುವ ಅನುಮಾನವಿದೆ. ಇದು ಮತ ಕಳ್ಳತನವಾಗಿದ್ದು, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪೊಲೀಸ್ ತನಿಖೆ ಮೂಲಕ ಸತ್ಯಾಂಶ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇರಳದಲ್ಲಿ ನೇರ ಸ್ಪರ್ಧೆ ಇದ್ದರೂ ಕಾಂಗ್ರೆಸ್‌ಗೆ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ. ಇದು ಸಂತೋಷ ತಂದಿದೆ ಎಂದರು. ತಮಿಳುನಾಡಿನಲ್ಲಿ ಜನರು ಬದಲಾವಣೆಯನ್ನು ಬಯಸಿರುವುದು ಸ್ಪಷ್ಟವಾಗಿದ್ದು, ಯುವ ಸಮುದಾಯ ಹೊಸ ರಾಜಕೀಯ ಅಧ್ಯಾಯ ಆರಂಭಿಸಿದೆ ಎಂದು ಅಭಿಪ್ರಾಯಪಟ್ಟರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯವರು ಹಲವು ಸಂಸ್ಥೆಗಳ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಮಮತಾ ಬ್ಯಾನರ್ಜಿ ಅವರಿಗೆ ಅನ್ಯಾಯವಾಗಿದೆ ಎಂದರೂ, ಜನರ ತೀರ್ಪನ್ನು ಗೌರವಿಸುತ್ತೇವೆ ಎಂದು ಹೇಳಿದರು.



