ಬೆಂಗಳೂರು :  ಹಿರಿಯ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ  ಚಿತ್ರ ‘ಅಮೆರಿಕಾ ಅಮೆರಿಕಾ 2’ 50 ದಿನಗಳನ್ನು ಪೂರೈಸಿ ಸಂಭ್ರಮಿಸಿದೆ. ಈ ವಿಶೇಷ ಮೈಲಿಗಲ್ಲಿನ ಪ್ರಯುಕ್ತ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಚಿತ್ರತಂಡ, ಕಲಾವಿದರು, ಸಾಹಿತ್ಯ ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಿ ಚಿತ್ರದ ಯಶಸ್ಸಿನ ಸಂತಸವನ್ನು ಪರಸ್ಪರ ಹಂಚಿಕೊಂಡರು.   ಚಿತ್ರವು ಬಿಡುಗಡೆಯಾದ ದಿನದಿಂದಲೇ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಣದ ಸವಾಲುಗಳು ಮತ್ತು ಶೂಟಿಂಗ್ ನೆನಪುಗಳನ್ನು ಮೆಲಕು ಹಾಕಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಚಿತ್ರದ ಗಳಿಕೆಯ ಬಗ್ಗೆ ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದರು.ಹಿರಿಯ ಕಲಾವಿದರು ಮತ್ತು ಚಿತ್ರರಂಗದ ದಿಗ್ಗಜರು ತೋರುತ್ತಿರುವ ಈ ಪ್ರೀತಿಯು ಕೋಟ್ಯಂತರ ರೂಪಾಯಿಗಳ ಗಳಿಕೆಗಿಂತಲೂ ಹೆಚ್ಚು ಅಮೂಲ್ಯವಾದದ್ದು  ಎಂದು ಅವರು ಅಭಿಪ್ರಾಯಪಟ್ಟರು.ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಪೃಥ್ವಿ ಅಂಬಾರ್ ಹಾಗೂ ನಟಿ ಶಾನ್ವಿ ಶ್ರೀವಾಸ್ತವ್ ಚಿತ್ರೀಕರಣದ ಸುಂದರ ಅನುಭವಗಳನ್ನು ಸ್ಮರಿಸಿದರು. ಜೊತೆಗೆ ಹಿರಿಯ ನಟ ಮಂಡ್ಯ ರಮೇಶ್ ಅವರ ನೈಜ ಅಭಿನಯ ಹಾಗೂ ಉಳಿದ ಕಲಾವಿದರ ಜೀವಂತ ಪಾತ್ರವರ್ಗ ಪ್ರೇಕ್ಷಕರನ್ನು ಗಾಢವಾಗಿ ತಲುಪಿರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿತು.