ಬೆಂಗಳೂರು :  ಸಸ್ಪೆನ್ಸ್ ಹಾಗೂ ಕ್ರೈಮ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಅಧಿಕೃತ ಟ್ರೇಲರ್   ಬಿಡುಗಡೆಯಾಗಿದೆ. ಇದರಲ್ಲಿ ನಟ ಧರ್ಮ ಕೀರ್ತಿರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮ. ಹರೀಶ್ ಹಾಗೂ ಹಿರಿಯ ಪ್ರಚಾರಕರ್ತ ನಾಗೇಂದ್ರ ಅವರು ಟ್ರೇಲರ್‌ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದಲ್ಲಿ ನಟ ಗುರುರಾಜ್ ಜಗ್ಗೇಶ್ ವಿಶೇಷ ಹಾಗೂ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಫ್ತಿ ಪೊಲೀಸ್ ಅಧಿಕಾರಿಯಾಗಿ   ಧರ್ಮ ಕೀರ್ತಿರಾಜ್ ನಟಿಸಿದ್ದಾರೆ. ಚಿತ್ರದಲ್ಲಿ ಹೆಸರಾಂತ ಖಳನಟರ ದೊಡ್ಡ ದಂಡೇ ಇದ್ದು, ರೋಣದ ಬಕ್ಕೇಶ್ ಅತ್ಯುತ್ತಮ ಸಂಗೀತ ನೀಡಿದ್ದಾರೆ.  ನಟ ಗುರುರಾಜ್ ಜಗ್ಗೇಶ್  ಕ್ರೂರಿ ಸ್ವಭಾವದ ಸವಾಲಿನ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಗಿ ಕಾರ್ಯಕ್ರಮದಲ್ಲಿ ವಿವರಿಸಿದರು.ಚಿತ್ರದ ನಾಯಕಿ, ತೆಲುಗು ಮೂಲದ ವೇದ್ವಿಕಾ ಅವರಿಗೆ ಇದು ಮೊದಲ ಕನ್ನಡ ಚಿತ್ರವಾಗಿದೆ.   ಮಾಳವಿಕಾ ಅವಿನಾಶ್ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿದ್ದು,ಒಟ್ಟು 29 ಪ್ರಮುಖ ಕಲಾವಿದರಿದ್ದು, ಡಿಸೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆದಿದೆ ಎಂದು ನಿರ್ದೇಶಕ ಪುನೀತ್ ಮಾಹಿತಿ ನೀಡಿದರು.