ರಾಜ್‌ ಕೋಟ್ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರು   ರಾಜ್‌ ಕೋಟ್‌ ನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಸುಧಾರಿತ ರೇಡಿಯೋಥೆರಪಿ (Radiotherapy) ಸೌಲಭ್ಯವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಸುಮಾರು 39 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದ್ದು, ರಾಜ್‌ ಕೋಟ್ ಮತ್ತು ಸೌರಾಷ್ಟ್ರ ಪ್ರದೇಶದಲ್ಲಿ ಆಧುನಿಕ ಕ್ಯಾನ್ಸರ್ ಚಿಕಿತ್ಸೆಯ ಲಭ್ಯತೆಯನ್ನು ಹೆಚ್ಚಿಸಲಿದೆ. ಇದರಿಂದ ಸುಮಾರು 1.54 ಕೋಟಿ ಜನರಿಗೆ ಅನುಕೂಲವಾಗಲಿದ್ದು, ಪ್ರತಿ ವರ್ಷ 500 ರಿಂದ 700 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿರಲಿದೆ.ಈ ಸಂದರ್ಭದಲ್ಲಿ ಮಾತನಾಡಿದ ಜೆ.ಪಿ. ನಡ್ಡಾ ಅವರು, ಪ್ರತಿಯೊಬ್ಬ ನಾಗರಿಕನಿಗೆ ಅವರ ಆರ್ಥಿಕ ಸ್ಥಿತಿ ಅಥವಾ ಭೌಗೋಳಿಕ ಪ್ರದೇಶವನ್ನು ಲೆಕ್ಕಿಸದೆ ಉತ್ತಮ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಹೇಳಿದರು.ಕ್ಯಾನ್ಸರ್ ಚಿಕಿತ್ಸೆಗಾಗಿ ದೂರದ ನಗರಗಳಿಗೆ ಅಲೆಯುವ ಅಗತ್ಯವಿಲ್ಲ : ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ವೈದ್ಯಕೀಯ, ಭಾವನಾತ್ಮಕ ಮತ್ತು ಆರ್ಥಿಕ ಹೊರೆಯನ್ನು ಪ್ರಸ್ತಾಪಿಸಿದ ಕೇಂದ್ರ ಸಚಿವರು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವುದು ಅತ್ಯಂತ ಅಗತ್ಯವಾಗಿದೆ ಎಂದರು. ಈ ಹೊಸ ಸೌಲಭ್ಯದಿಂದ ಸೌರಾಷ್ಟ್ರ ಮತ್ತು ಕಚ್ ಭಾಗದ ಜನರಿಗೆ ಹೆಚ್ಚಿನ ಲಾಭವಾಗಲಿದೆ. ಈ ಹಿಂದೆ ವಿಶೇಷ ಕ್ಯಾನ್ಸರ್ ಚಿಕಿತ್ಸೆಗಾಗಿ ರೋಗಿಗಳು ಅಹಮದಾಬಾದ್ ಮತ್ತು ಮುಂಬೈನಂತಹ ದೂರದ ನಗರಗಳಿಗೆ ತೆರಳಬೇಕಾಗಿತ್ತು, ಆದರೆ ಈಗ ರಾಜ್‌ಕೋಟ್‌ನಲ್ಲೇ ಆಧುನಿಕ ರೇಡಿಯೋಥೆರಪಿ ಸೇವೆಗಳು ಸಿಗಲಿವೆ.ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ 18 ಏಮ್ಸ್ ಸಂಸ್ಥೆಗಳು : ದೇಶದ ಆರೋಗ್ಯ ಸೇವೆಗಳ ವಿಸ್ತರಣೆಯ ಕುರಿತು ಮಾತನಾಡಿದ ಅವರು, ಈ ಹಿಂದೆ ದೇಶದಲ್ಲಿ ನವದೆಹಲಿಯಲ್ಲಿ ಮಾತ್ರ ಒಂದು ಏಮ್ಸ್ ಇತ್ತು. ಆದರೆ ಈಗ ಮಂಜೂರಾದ 22 ಏಮ್ಸ್ ಸಂಸ್ಥೆಗಳ ಪೈಕಿ 18 ಸಂಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಉನ್ನತ ಮಟ್ಟದ ಆರೋಗ್ಯ ಸೇವೆಗಳು ಸಾಮಾನ್ಯ ಜನರಿಗೆ ಸುಲಭವಾಗಿ ದೊರೆಯುತ್ತಿವೆ ಎಂದು ತಿಳಿಸಿದರು.ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುಜರಾತ್ ಆರೋಗ್ಯ ಸಚಿವ ಪ್ರಫುಲ್ ಪನ್ಸೇರಿಯಾ, ಸಂಸದರಾದ ಪರಷೋತ್ತಮ್‌ಭಾಯಿ ರೂಪಾಲಾ, ಕೇಸರೀದೇವ್‌ಸಿಂಗ್ ಝಾಲಾ ಹಾಗೂ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.