ಬಾಗಲಕೋಟೆ :  ಎಥೆನಾಲ್ ಮಿಶ್ರಣದ ಕುರಿತು ಸಚಿವ ರಿಜ್ವಾನ್ ಅರ್ಷದ್  ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರಗೇಶ್ ನಿರಾಣಿ ಹೇಳಿದ್ದಾರೆ.ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ರಾಜ್ಯ ಸರ್ಕಾರದ ಆಡಳಿತ, ಅಗತ್ಯ ವಸ್ತುಗಳ ಬೆಲೆ ಏರಿಕೆ, ರಾಜ್ಯದ ಸಾಲದ ಹೊರೆ ಹಾಗೂ ಎಥೆನಾಲ್ ಮಿಶ್ರಣದ ಕುರಿತು   ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಸರ್ಕಾರ ಇಂತಹ ಹುನ್ನಾರ ನಡೆಸುತ್ತಿದೆ. ಕಾಂಗ್ರೆಸ್ ನಾಯಕರ ಆರೋಪ ಸತ್ಯಕ್ಕೆ ದೂರವಾದದ್ದು. ನಾವು ಪರೀಕ್ಷಿಸಿರುವ ಪ್ರಕಾರ ಇ20 (E20) ವಾಹನಗಳಿಗೆ ಕೇವಲ ಶೇ. 20ರಷ್ಟು ಮಾತ್ರ ಎಥೆನಾಲ್ ಮಿಶ್ರಣ ಮಾಡಲಾಗುತ್ತದೆ. ಸರ್ಕಾರ ಒಂದು ಸಮಿತಿ ರಚಿಸಲಿ, ಸಚಿವರು ಹೇಳಿದ ಪೆಟ್ರೋಲ್ ಬಂಕ್‌ನಲ್ಲಿಯೇ ಮಾಧ್ಯಮಗಳ ಸಮ್ಮುಖದಲ್ಲಿ ಸ್ಯಾಂಪಲ್ ಟೆಸ್ಟ್ ಮಾಡೋಣ ಎಂದು ಅವರು ನೇರ ಸವಾಲು ಹಾಕಿದ್ದಾರೆ.ಎಥೆನಾಲ್  ಉತ್ಪಾದನೆ ಕುರಿತು ವಿವರಿಸಿದ ಅವರು, ಕಬ್ಬು, ಮೆಕ್ಕೆಜೋಳ ಹಾಗೂ ಜೋಳದಿಂದ ಎಥೆನಾಲ್ ತಯಾರಿಸಲಾಗುತ್ತದೆ. ಇಡೀ ದೇಶದಲ್ಲಿಯೇ ನಾವು ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುತ್ತೇವೆ. ಆದರೆ ಬರಗಾಲದ ಹಿನ್ನೆಲೆಯಲ್ಲಿ ಈ ವರ್ಷ ಅಂದಾಜು ಶೇ. 20ರಷ್ಟು ಕಬ್ಬು ಉತ್ಪಾದನೆ ಕಡಿಮೆಯಾಗಿದ್ದು, ಸಕ್ಕರೆ ಉತ್ಪಾದನೆಯೂ ಇಳಿಕೆಯಾಗಿದೆ. ಸಾಂದ್ರತೆ   ಬದಲಾವಣೆಯ ಕಾರಣದಿಂದ ಎಥೆನಾಲ್ ಕೇವಲ ಪೆಟ್ರೋಲ್‌ನಲ್ಲಿ ಮಾತ್ರ ಮಿಶ್ರಣವಾಗುತ್ತದೆ, ಡೀಸೆಲ್‌ನಲ್ಲಿ ಮಿಶ್ರಣವಾಗುವುದಿಲ್ಲ. ಡೀಸೆಲ್‌ನಲ್ಲಿ ಮಿಶ್ರಣ ಮಾಡಲು ‘ಐಸೋ ಬ್ಯುಟನಾಲ್’  ಎಂಬ ಸಂಶೋಧನೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.