ಬೆಂಗಳೂರು :  ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ಹಾಗೂ ದಿನೇದಿನೇ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿರುವುದನ್ನು ಖಂಡಿಸಿ, ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ  ಬೃಹತ್ ಪ್ರತಿಭಟನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಮಾಜಿ ಸಿಎಂ ಬಿ.ಎಸ್‌ ವೈ ಮಾತನಾಡಿ ರಾಜ್ಯ ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ. ಸರ್ಕಾರಿ ಬಸ್‌ಗಳಿಗೆ ಇಂಧನ ಹಾಕುವ ಸಾಮರ್ಥ್ಯವೂ ಈ ಸರ್ಕಾರಕ್ಕಿಲ್ಲ. ಹಣ ಬಲ, ತೋಳ್ಬಲ, ಹೆಂಡದ ಬಲದ ಮೇಲಿರುವ ಈ ಸರ್ಕಾರವನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಬರುವುದು ನಿಶ್ಚಿತ ಎಂದರು.ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಚಾರ ನಡೆಸುವುದೇ ದುಸ್ತರವಾಗಲಿದೆ. ಜನರ ಮುಂದೆ ಹೋದಲ್ಲಿ ಮುಖಭಂಗ ಅನುಭವಿಸುವುದು ನಿಶ್ಚಿತ. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ರಾಜ್ಯದ ಜನತೆ ಈ ದರಿದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ  ಮಾತನಾಡಿ ಪೆಟ್ರೋಲ್‌, ಡಿಸೇಲ್‌ ಮೇಲಿನ ತೆರಿಗೆಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ನಾಲ್ಕು ಬಾರಿ ಹೆಚ್ಚಳ ಮಾಡಿದೆ, ಸ್ಟ್ಯಾಂಪ್‌ ಡ್ಯೂಟಿ, ಆಸ್ಪತ್ರೆಯ ಸೇವಾದರವನ್ನೂ ಹೆಚ್ಚಿಸಿದ್ದ ಸರ್ಕಾರ, ಹಬ್ಬದ ಸಂಭ್ರಮದ ನಡುವೆಯೂ ಹಾಲು, ಮೊಸರು, ತುಪ್ಪದ ಮೇಲೆ ದರ ಹೆಚ್ಚಳ ಮಾಡಿದೆ. ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಹೈಕೋರ್ಟ್‌ ಕೂಡಾ ಛೀಮಾರಿ ಹಾಕಿದೆ ಎಂದರು.ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಮಾತನಾಡಿ ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜ್ಯದ ಪ್ರತೀ ಜನರ ಮೇಲೆ ₹1.5 ಲಕ್ಷ ಸಾಲದ ಹೊರೆ ಹೊರಿಸಿದೆ. ಈ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ. ಬಿಜೆಪಿ ಅವಧಿಯಲ್ಲಿ ಸಾರಿಗೆ ಸಂಸ್ಥೆ ಲಾಭದಲ್ಲಿತ್ತು, ಆದರೆ ಇಂದು ನಷ್ಟದ ಹಾದಿಯಲ್ಲಿದೆ, ಬಸ್ಸುಗಳಿಗೆ ಡಿಸೇಲ್‌ ಹಾಕಲೂ ಸರ್ಕಾರದ ಬಳಿ ದುಡ್ಡಿಲ್ಲ. ಎಲ್ಲರಿಗೂ ಫ್ರೀ ಫ್ರೀ ಎಂದಿದ್ದ ಕಾಂಗ್ರೆಸ್‌ ಈಗ ಮುಂದಿನ ತಲೆಮಾರಿಗೂ ಸಾಲದ ಹೊರೆ ಹೊರಿಸಿದೆ‌ ಎಂದು ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಸಂಸದರಾದ ಯದುವೀರ್‌ ಒಡೆಯರ್‌,  ಬಸವರಾಜ ಬೊಮ್ಮಾಯಿ ಅವರು,    ಜಗದೀಶ್ ಶೆಟ್ಟರ್ , ಮಾಜಿ ಉಪಮುಖ್ಯಮಂತ್ರಿಗಳಾದ  ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್   ಸೇರಿದಂತೆ ಪಕ್ಷದ ಹಿರಿಯ ನಾಯಕರು, ಸಂಸದರು, ಶಾಸಕರು, ಮುಖಂಡರು ಹಾಗೂ ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು.