ನವದೆಹಲಿ: ಸ್ವಚ್ಛ ಭಾರತ ಮಿಷನ್-ನಗರ  ಯೋಜನೆಯಡಿ ಭಾರತದ ಅತ್ಯಂತ ಸ್ವಚ್ಛ ನಗರಗಳನ್ನು ಗುರುತಿಸಿ ಗೌರವಿಸುವ 'ಸ್ವಚ್ಛ ಸರ್ವೇಕ್ಷಣೆ 2025-26' (Swachh Survekshan 2025-26) ಪ್ರಶಸ್ತಿ ಪ್ರದಾನ ಸಮಾರಂಭವು ಹೊಸ ದೆಹಲಿಯಲ್ಲಿ ವೈಭವದಿಂದ ಜರುಗಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಚ್ಛತೆಗೆ ಅತ್ಯುತ್ತಮ ಕೊಡುಗೆ ನೀಡಿದ ನಗರ ಮತ್ತು ರಾಜ್ಯಗಳಿಗೆ ಪ್ರಶಸ್ತಿಗಳನ್ನು ವಿತರಿಸಿ ಗೌರವಿಸಿದರು.ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್, ರಾಜ್ಯ ಸಚಿವ ತೋಖಾನ್ ಸಾಹು, ಕಾರ್ಯದರ್ಶಿ ಸತೇಂದರ್ ಸಿಂಗ್ ಹಾಗೂ ಡಿ. ತಾರಾ ಅವರು ಉಪಸ್ಥಿತರಿದ್ದರು.ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರೂಪಿಸಿದ 10ನೇ ಆವೃತ್ತಿಯ ಸ್ವಚ್ಛ ಸರ್ವೇಕ್ಷಣೆಯು ʼಸ್ವಚ್ಛತೆಯ ಹೊಸ ಹೆಜ್ಜೆ - ಕೈ ಜೋಡಿಸೋಣ, ಒಟ್ಟಾಗಿ ಸ್ವಚ್ಛಗೊಳಿಸೋಣʼ  (Swachhata Ki Nayi Pehel- Badhayein Haath, Karein Safai Saath) ಎಂಬ ಧ್ಯೇಯವಾಕ್ಯದೊಂದಿಗೆ (Theme) ಯಶಸ್ವಿಯಾಗಿ ಪೂರ್ಣಗೊಂಡಿದೆ.  2016ರಲ್ಲಿ ಕೇವಲ 73 ನಗರ ಸ್ಥಳೀಯ ಸಂಸ್ಥೆಗಳಿಂದ (ULBs) ಪ್ರಾರಂಭವಾದ ಈ ಸ್ವಚ್ಛತಾ ಆಂದೋಲನವು, ಪ್ರಸ್ತುತ 10ನೇ ಆವೃತ್ತಿಯ ವೇಳೆಗೆ 4,000ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿ ಬೃಹತ್ ರೇಟಿಂಗ್ ವ್ಯವಸ್ಥೆಯಾಗಿ ಬೆಳೆದಿದೆ.ಈ ಬಾರಿಯ ಸರ್ವೇಕ್ಷಣೆಯಲ್ಲಿ ಸಾರ್ವಜನಿಕರ ಹಸಿ-ಒಣ ತ್ಯಾಜ್ಯ ಬೇರ್ಪಡಣೆ ಮತ್ತು ಅಭಿಪ್ರಾಯಗಳಿಗೆ (Citizen Feedback) ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ ನಗರಗಳ ನದಿ ತೀರಗಳ (Urban River Fronts) ಸ್ವಚ್ಛತೆ, ಬಯಲು ಶೌಚ ಮತ್ತು ಬಯಲು ಮೂತ್ರ ವಿಸರ್ಜನೆ ತಡೆಗಟ್ಟುವಿಕೆ ಹಾಗೂ ಶಾಲಾ ಮಟ್ಟದಲ್ಲಿ ನಡವಳಿಕೆ ಬದಲಾವಣೆ ತರುವ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡಲಾಗಿತ್ತು. 10ನೇ ಆವೃತ್ತಿಯ ಅಂಗವಾಗಿ ನಗರ ಸ್ಥಳೀಯ ಸಂಸ್ಥೆಗಳನ್ನು 10 ಪ್ರಮುಖ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 43 ಸೂಚಕಗಳನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗಿದೆ. ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ, ಘನತ್ಯಾಜ್ಯ ನಿರ್ವಹಣೆ, ನೈರ್ಮಲ್ಯದ ಲಭ್ಯತೆ, ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಹಾಗೂ ಸಾರ್ವಜನಿಕರ ದೂರು ಪರಿಹಾರ ವ್ಯವಸ್ಥೆಗಳು ಈ ಮೌಲ್ಯಮಾಪನದ ಪ್ರಮುಖ ಭಾಗವಾಗಿದ್ದವು.